

ಮದ್ದೂರು: ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಬೇಕು ಎಂದು ಟಿಎಪಿಸಿಎಂಎಸ್ ನಿರ್ದೇಶಕ ಮರಿದೇವರು ಹೇಳಿದರು.
ನಗರದ ಅರ್ಜುನಪುರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಟಿಬಿ ವೃತ್ತದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿರು. ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡ ಭಾಷೆಯಲ್ಲಿ ಹೇಳಿದಂತೆ ಬರೆಯುವ ಹಾಗೂ ಬರೆದಂತೆ ಮಾತನಾಡುವ ಸಾಮರ್ಥ್ಯವಿರುವ ಭಾಷೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇತರ ಭಾಷೆಗಳನ್ನು ಗೌರವಿಸಬೇಕು ಆದರೆ, ಕನ್ನಡ ಭಾಷೆ ಮೇಲಿರುವ ಪ್ರೀತಿ ಎಂದಿಗೂ ಕಡಿಮೆಯಾಗಬಾರದು. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವಂತೆ ಮಾಡಬೇಕೆಂದು ಮನವಿ ಮಾಡಿದರು.
ಆಟೋ ಚಾಲಕರು ಜೀವಾ ವಿಮೆ, ವಾಹನ ವಿಮೆ ಮಾಡಿಸಿಕೊಳ್ಳಬೇಕು ಹಾಗೂ ಕಾಲ ಕಾಲಕ್ಕೆ ಆಟೋ ಸಂಬಂಧಪಟ್ಟ ದಾಖಲಾತಿಗಳನ್ನು ನವೀಕರಣ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂಜಿನಿಯರ್ ಸುರೇಶ್, ನಿವೃತ್ತ ಪ್ರಧ್ಯಾಪಕ ಶಂಕರಯ್ಯ, ನಿವೃತ್ತ ಮುಖ್ಯಾಧಿಕಾರಿ ಚಂದ್ರಶೇಖರ್, ಮುಖಂಡರಾದ ಡಿ.ಪಿ.ಶಿವಪ್ಪ, ದೊರೆಸ್ವಾಮಿ, ಶಿವಲಿಂಗಯ್ಯ, ನರಸಿಂಹ, ಆಟೋ ಚಾಲಕರಾದ ಕಾಶಿ ಆರಾಧ್ಯ, ನಂದೀಶ್, ಮೂರ್ತಿ, ಸೋಮಶೇಖರ್, ಚಂದ್ರಣ್ಣ, ಆನಂದ್ಕುಮಾರ್, ರಾಜು, ಚನ್ನೇಗೌಡ, ವಿನಯ್, ಅಪ್ಪು, ಶಿವರಾಜು ಇತರರು ಇದ್ದರು.