ಐದು ದಶಕಗಳ ಬಳಿಕ ಹಾಡಿಗೆ ಬಂತು ಸರ್ಕಾರಿ ಬಸ್!

ಕೆಬ್ಬೆಪುರ ಹಾಡಿಗೆ ಎಚ್.ಡಿ.ಕೋಟೆ ಡಿಪೋದಿಂದ ಸೌಕರ್ಯ
ಎಚ್.ಡಿ.ಕೋಟೆ ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಯಲ್ಲಿ ಕೋಟೆ ಬಸ್ ಘಟಕದ ವತಿಯಿಂದ ಹಾಡಿಯಿಂದ ಬಿ.ಮಟಕೆರೆ ಮಾರ್ಗವಾಗಿ ಸರಗೂರಿಗೆ ಸಂಚರಿಸುವ ಬಸ್‌ಗೆ ಮಂಗಳವಾರ ಚಾಲನೆ ನೀಡಲಾಯಿತು. ಸೀರಮ್ಮ, ಚಿಕ್ಕ ಬೊಮ್ಮ, ಗೋವಿಂದರಾಜು, ಚನ್ನ ಕೋಟೆ, ಪ್ರಕಾಶ್ ಬುದ್ಧ, ಅನಿಲ್ ಸಿಂಗ್ ಹೈರಿಗೆ, ಗುರು ನೂರಲಕುಪ್ಪೆ ಇತರರಿದ್ದರು.
ಎಚ್.ಡಿ.ಕೋಟೆ ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಯಲ್ಲಿ ಕೋಟೆ ಬಸ್ ಘಟಕದ ವತಿಯಿಂದ ಹಾಡಿಯಿಂದ ಬಿ.ಮಟಕೆರೆ ಮಾರ್ಗವಾಗಿ ಸರಗೂರಿಗೆ ಸಂಚರಿಸುವ ಬಸ್‌ಗೆ ಮಂಗಳವಾರ ಚಾಲನೆ ನೀಡಲಾಯಿತು. ಸೀರಮ್ಮ, ಚಿಕ್ಕ ಬೊಮ್ಮ, ಗೋವಿಂದರಾಜು, ಚನ್ನ ಕೋಟೆ, ಪ್ರಕಾಶ್ ಬುದ್ಧ, ಅನಿಲ್ ಸಿಂಗ್ ಹೈರಿಗೆ, ಗುರು ನೂರಲಕುಪ್ಪೆ ಇತರರಿದ್ದರು.
Published on: 

ಎಚ್.ಡಿ.ಕೋಟೆ: ನಾಲ್ಕೈದು ದಶಕಗಳಿಂದ ಸಾರಿಗೆ ವ್ಯವಸ್ಥೆ ಇಲ್ಲದ ಕಾಡಂಚಿನ ಗ್ರಾಮ ಕೆಬ್ಬೆಪುರ ಹಾಡಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಶಾಸಕ ಅನಿಲ್ ಚಿಕ್ಕಮಾದು ಅವರು ಆದಿವಾಸಿ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸರಗೂರು ಮಹಿಳಾ ಘಟಕದ ಸಂಚಾಲಕಿ ಸೀರಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸರಗೂರು ತಾಲೂಕಿನ ಕೆಬ್ಬೆಪುರ ಹಾಡಿಗೆ ಮಂಗಳವಾರ ಎಚ್.ಡಿ.ಕೋಟೆ ಬಸ್ ಘಟಕದ ವತಿಯಿಂದ ಬಸ್ ವ್ಯವಸ್ಥೆಗೆ ಚಾಲನೆ ವೇಳೆ ಮಾತನಾಡಿದರು.

ಸುಮಾರು 50 ವರ್ಷಗಳ ಹಿಂದೆ ಕಾಡಿನಲ್ಲಿ ವಾಸ ಮಾಡುತ್ತಿದ್ದ ನಮ್ಮನ್ನು ಕೆಬ್ಬೆಪುರ ಹಾಡಿಯಲ್ಲಿ ಸರ್ಕಾರ ವಾಸ ಮಾಡಲು ಅವಕಾಶ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಹಾಡಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಹಾಡಿಗೆ ಬಸ್ ಸಂಚಾರ ಮಾಡುವಂತೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದಾಗ ಹಾಡಿಗೆ ಸರಿಯಾದ ರಸ್ತೆ ಇಲ್ಲದಿರುವುದರಿಂದ ಬಸ್ ಸಂಚಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದದ್ದರು. ಹಾಗಾಗಿ ರಸ್ತೆ ಮಾಡಿ ಬಸ್ ಸಂಚಾರ ಮಾಡಿಸುವಂತೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನಮ್ಮ ಸಂಘಟನೆ ವತಿಯಿಂದ ಮನವಿ ಮಾಡಿದ ಮೇರೆಗೆ ಶಾಸಕರು ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ರಸ್ತೆಯನ್ನು ಮಾಡಿಸಿ ನಂತರ ಸಾರಿಗೆ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಇದರಿಂದ ನಮ್ಮ ಗ್ರಾಮದ ಸರಗೂರು ಮತ್ತು ಎಚ್.ಡಿ. ಕೋಟೆಗೆ ತೆರಳುವ ಶಾಲಾ-ಕಾಲೇಜು ಮಕ್ಕಳಿಗೆ ಗ್ರಾಮಸ್ಥರಿಗೆ ತುಂಬ ಅನುಕೂಲವಾಗಿದೆ ಎಂದು ಶಾಸಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಂಘಟನೆಯ ಸರಗೂರು ತಾಲೂಕಿನ ಸಂಚಾಲಕ ಗೋವಿಂದರಾಜು ಕೂಡಗಿ ಮಾತನಾಡಿ, ಅವಕಾಶ ವಂಚಿತ ಜನರಿಗೆ ಸೌಲಭ್ಯ ನೀಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ಹಾಡಿಯ ಜನರ ಪರಿಸ್ಥಿತಿಯನ್ನು ತರುತ್ತಿದ್ದಂತೆ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಸೌಲಭ್ಯಗಳನ್ನು ದೊರಕಿಸುವ ಕೆಲಸ ಮಾಡಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಮತ್ತು ಶಾಸಕಾಂಗದ ಮೇಲೆ ಹೆಚ್ಚು ಭರವಸೆ ಮೂಡುವಂತೆ ಆಗಿದೆ ಎಂದರು.

ಗ್ರಾಮದ ಚಿಕ್ಕ ಬೊಮ್ಮ ಮಾತನಾಡಿ, ಗ್ರಾಮದಲ್ಲಿ ಹಲವಾರು ಮೂಲಸೌಕರ್ಯಗಳ ಕೊರೆ ಇದ್ದು, ಅದನ್ನು ಶಾಸಕರ ಗಮನಕ್ಕೆ ತಂದ ನಂತರ ಅವರು ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಮೊಳೆಯೂರು ಗ್ರಾಮದಿಂದ ಕೆಬ್ಬೆಪುರ ಹಾಡಿವರೆಗೆ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ಶಾಸಕರು ಆದಿವಾಸಿಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಿಂದ ನಮ್ಮ ಸಮುದಾಯ ಮುಂದೆ ಬರಲು ಸಾಧ್ಯ ಆಗಿದೆ ಎಂದು ತಿಳಿಸಿದರು.

ಸಂಘಟನೆ ಎಚ್.ಡಿ.ಕೋಟೆ ತಾಲೂಕು ಸಂಚಾಲಕ ಚನ್ನ ಕೋಟೆ, ಸಂಘಟನಾ ಸಂಚಾಲಕರಾದ ಪ್ರಕಾಶ್ ಬುದ್ಧ, ಅನಿಲ್ ಸಿಂಗ್ ಹೈರಿಗೆ, ಗುರು ನೂರಲಕುಪ್ಪೆ, ಸರಗೂರು ತಾಲೂಕು ಸಂಘಟನಾ ಸಂಚಾಲಕರಾದ ಮಣಿಕಂಠ ಮಠದ ಕಟ್ಟೆ, ಕೃಷ್ಣ ಕುರ್ಣಿಗಾಲ, ನಾಗೇಂದ್ರ ಮೊಳೆಯೂರು, ಶಿವಕುಮಾರ್ ಚಂಗೌಡನಹಳ್ಳಿ, ಮಹಾದೇವ ಕಾಡ್ಬೇಗೂರು, ಕೆಬ್ಬೆಪುರ ಹಾಡಿಯ ಮುಖಂಡರಾದ ಮಾಚಮ್ಮ, ಸುಮಾವತಿ, ಲಕ್ಷ್ಮೀ, ಬಸವ, ಲಕ್ಷ್ಮಣ, ಗಣೇಶ, ಬಸ್ ಚಾಲಕ ಸುಂದರೇಶ್, ನಿರ್ವಾಹಕ ಅವಿನಾಶ್ ಇದ್ದರು.