ಅಶ್ಲೀಲ ಮೆಸೇಜ್ ಕಳುಹಿಸಿದ್ದ ಉಪನ್ಯಾಸಕನಿಗೆ ಗೂಸಾ

ಪೊಲೀಸರು, ಕಾಲೇಜು ಸಿಬ್ಬಂದಿ ಎದುರೇ ವಿದ್ಯಾರ್ಥಿನಿಯರಿಂದ ಥಳಿತ
ಅಶ್ಲೀಲ ಮೆಸೇಜ್ ಕಳುಹಿಸಿದ್ದ ಉಪನ್ಯಾಸಕನಿಗೆ ಗೂಸಾ
Published on: 

ನಾಗಮಂಗಲ: ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ದೂರು ನೀಡುವುದರ ಜತೆಗೆ ಕಾಲೇಜು ಸಿಬ್ಬಂದಿ, ಪೊಲೀಸರ ಸಮ್ಮುಖದಲ್ಲೇ ಥಳಿಸಿದ್ದಾರೆ.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿನಿಯರು ಉಪನ್ಯಾಸಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆರೋಪಿತ ಉಪನ್ಯಾಸಕ ಕಾಲೇಜಿನ ಮೂವರು ವಿದ್ಯಾರ್ಥಿನಿಯರಿಗೆ ಅಸಭ್ಯ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದು, ಈ ಸಂದೇಶಗಳನ್ನು ಗಮನಿಸಿದ ವಿದ್ಯಾರ್ಥಿನಿಯರು ಉಪನ್ಯಾಸಕಿಗೆ ಸಂದೇಶದ ಮೂಲಕವೇ ವಿರೋಧ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯನಿರ ವಿರೋಧದ ಬೆನ್ನಲ್ಲೇ ತಾನು ಮಾಡಿದ್ದ ಸಂದೇಶಗಳನ್ನು ಡಿಲೀಟ್ ಮಾಡಿದ್ದಾನೆ. ಆದರೆ ವಿದ್ಯಾರ್ಥಿನಿಯರು ಉಪನ್ಯಾಸಕ ಕಳುಹಿಸಿದ್ದ ವಾಟ್ಸ್‌ಆ್ಯಪ್ ಸಂದೇಶಗಳನ್ನು ಸ್ಕ್ರೀನ್‌ಶಾಟ್ ಮಾಡಿ ಪ್ರಿಂಟ್ ಹಾಕಿಸಿ ಲಿಖಿತ ದೂರಿನೊಂದಿಗೆ ಕಾಲೇಜಿನ ಪ್ರಾಂಶುಪಾಲರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಗಂಭೀರತೆ ಅರಿತ ಪ್ರಾಂಶುಪಾಲರು ಜಂಟಿ ನಿರ್ದೇಶಕರಿಗೆ ದೂರನ್ನು ರವಾನಿಸಿದ್ದು, ಅದರ ಮೇರೆಗೆ ಜಂಟಿ ನಿರ್ದೇಶಕರು ತಕ್ಷಣವೇ ಆಗಮಿಸಿ ಗುರುವಾರ ವಿದ್ಯಾರ್ಥಿನಿಯರು ಹಾಗೂ ಆರೋಪಿತ ಉಪನ್ಯಾಸಕನನ್ನು ವಿಚಾರಣೆ ನಡೆಸಿದ್ದಾರೆ.

ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.