

ಹಲಗೂರು: ಜನರು ಪಾವತಿಸುವ ತೆರಿಗೆಯ ಹಣದಿಂದಲೇ ಸರ್ಕಾರ ನಡೆಯುತ್ತದೆ. ಆದರೆ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸ ಬರಿದಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡದೆ ಜನರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.
ಸಮೀಪದ ಗುಂಡಾಪುರ ಗೇಟ್ ಬಳಿಯ ಶ್ರೀ ಬೆಟ್ಟದರಸಮ್ಮ ದೇವಿಯ ನೂತನ ಸ್ವಾಗತ ಕಮಾನಿಗೆ ಕಳಸ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಲೋಕಾರ್ಪಣೆ ನೆರವೇರಿಸಿ ಮಾತನಾಡಿ, ರಾಜ್ಯದ ಖಜಾನೆ ಖಾಲಿಯಾಗಿದ್ದು, ನಿರೀಕ್ಷಿತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳು ಕೇವಲ ಘೋಷಣೆಗಳನ್ನು ಮಾಡುವುದರಿಂದ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ. ರೈತರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ದೇಶದಲ್ಲಿ ಇಂದಿಗೂ ಬಡತನ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಬಡವರ ಬದುಕಿನಲ್ಲಿ ಬದಲಾವಣೆ ತರುವಂತಹ ಕಾರ್ಯಕ್ರಮಗಳಿಗೆ ಸರ್ಕಾರಗಳು ಆದ್ಯತೆ ನೀಡಬೇಕು ಎಂದರು.
ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಅಧಿಕಾರದ ಸ್ಥಾನವನ್ನು ಪಡೆದಿದ್ದು, ಜನರ ಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇನೆ. ಜನರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದರು.
ಜೆಡಿಎಸ್ ಮುಖಂಡರಾಗಿದ್ದ ರಾಮಚಂದ್ರಗೌಡ ಅವರ ಸ್ಮರಣಾರ್ಥ ಆರೋಗ್ಯ ಉಚಿತ ತಪಾಸಣೆ ಹಾಗೂ ಮೂಳೆ ಮತ್ತು ಕೀಲು ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಧಾರ್ಮಿಕ ಕೈಂಕರ್ಯ: ನ.17ರಂದು ಬೆಳಗ್ಗೆ 8.35ಕ್ಕೆ ಧನಸ್ಸು ಲಗ್ನದ ಶುಭ ಮುಹೂರ್ತದಲ್ಲಿ ಮಹೋತ್ಸವದ ಅಂಗವಾಗಿ ಗಣಪತಿ ಪೂಜೆ, ಗಂಗಾಪೂಜೆ, ಗೋ ಪೂಜೆ, ಪೂರ್ಣಕುಂಭ ಪೂಜೆ, ಶ್ರೀ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ ಗದ್ದುಗೆ ಪೂಜೆ ಹಾಗೂ ನೂತನ ಗೋಪುರ ಮತ್ತು ಕಲಶಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ವೀರಗಾಸೆ, ಮಂಗಳವಾದ್ಯ ಹಾಗೂ ತಮಟೆ ವಾದ್ಯಗಳೊಂದಿಗೆ ಕರಗದ ಬೀದಿಯಲ್ಲಿ ಯಾಗಶಾಲೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಬಳಿಕ ಧ್ವಜಾರೋಹಣ, ಯಾಗಶಾಲಾ ಪ್ರವೇಶ, ವಿವಿಧ ದೇವತೆಗಳ ಪೂಜೆ, ಹೋಮ ಹಾಗೂ ಪೂರ್ಣಾಹುತಿ ಸೇರಿದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಸಂಜೆ ಅನ್ನಸಂತರ್ಪಣೆ ಮಾಡಲಾಗಿತ್ತು.
ಸಿದ್ಧಗಂಗಾ ಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹಾಗೂ ದೇಗುಲ ಮಠದ ಶ್ರೀ ಚನ್ನಬಸವ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಮಂಜೇಶ್, ಕಂಸಾಗರ ರವಿ, ಡಾ.ಜಗದೀಶ್, ಶರತ್, ಸುರೇಂದ್ರ, ಎನ್.ಕೆ.ಕುಮಾರ್, ಬಸವರಾಜೇಗೌಡ, ಎವಿಟಿ ಕುಮಾರ್, ಕುಮಾರಸ್ವಾಮಿ, ಆನಂದಕುಮಾರ್ ಸೇರಿದಂತೆ ಹಲವು ಮುಖಂಡರು, ಭಕ್ತರು ಇದ್ದರು.