ಹಾಸ್ಟೆಲ್‌ಗಳಲ್ಲಿ ಶುಚಿ, ರುಚಿ ಊಟ ಒದಗಿಸಿ

ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ  ವಿದ್ಯಾರ್ಥಿ ನಿಲಯಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಮಂಜುಳಾ, ಲೋಕೇಶ್, ರವಿಕುಮಾರ್, ರಾಜೇಶ್ವರಿ, ರಾಮಲಿಂಗಯ್ಯ, ಧನಂಜಯ ಇದ್ದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಮಂಜುಳಾ, ಲೋಕೇಶ್, ರವಿಕುಮಾರ್, ರಾಜೇಶ್ವರಿ, ರಾಮಲಿಂಗಯ್ಯ, ಧನಂಜಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಕೆ.ಆರ್. ನಂದಿನಿ ಸೂಚನೆ
  • ಸೋಮನಹಳ್ಳಿಯ ವಿವಿಧ ವಿದ್ಯಾರ್ಥಿನಿಲಯಗಳಿಗೆ ದಿಢೀರ್ ಭೇಟಿ
ಮದ್ದೂರು : ತಾಲೂಕಿನ ಸೋಮನಹಳ್ಳಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ನಂದಿನಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಹಾಸ್ಟೆಲ್‌ನಲ್ಲಿ ನಿಗದಿತ ಮೆನು ಪ್ರಕಾರ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸಬೇಕು. ಆಹಾರ ತಪಾಸಣೆ ಮಾಡಿಸಬೇಕು, ಸುರಕ್ಷತೆ, ಭದ್ರತೆ ಕಾಯ್ದಕೊಳ್ಳಬೇಕು ಎಂದು ಸೂಚನೆ ನೀಡಿದರು.
ನಿಲಯ ಪೋರ್ಟಲ್‌ನಲ್ಲಿ ವಸತಿ ನಿಲಯಗಳಲ್ಲಿನ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ 60 ಪ್ರಶ್ನಾವಳಿಗಳಿದ್ದು, ಈ ಎಲ್ಲ ಪ್ರಶ್ನಾವಳಿಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಿ ವಸತಿ ನಿಲಯಗಳಲ್ಲಿನ ಸೌಲಭ್ಯಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆ, ಆನ್‌ಲೈನ್ ಗೇಮ್‌ನಂತಹ ಇತರೆ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಬಾರದು. ವಾರ್ಡನ್‌ಗಳು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಬೇಕು, ಅವರನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವಂತಹ ಕೆಲಸ ಮಾಡಬೇಕೆಂದು ಎಂದು ವಸತಿ ನಿಲಯದ ವಾರ್ಡನ್‌ಗೆ ತಿಳಿಸಿದರು.
ಸಹಾಯವಾಣಿ ಸಂಖ್ಯೆ ಅಳವಡಿಸಲು ಸೂಚನೆ: ವಸತಿ ನಿಲಯಗಳಲ್ಲಿನ ಕುಂದುಕೊರತೆಗಳ ಬಗ್ಗೆ ದೂರು ದಾಖಲಿಸಲು ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿದ್ದು, ಸದರಿ ಸಂಖ್ಯೆಯನ್ನು ವಸತಿ ನಿಲಯದ ಅಡುಗೆ ಮನೆ, ನೋಟಿಸ್ ಬೋರ್ಡ್, ಶಾಲೆಯ ಮುಖ್ಯದ್ವಾರ ಸೇರಿದಂತೆ ಇತರ ಕಡೆಗಳಲ್ಲಿ ಡಿ.31ರೊಳಗೆ ಪ್ರದರ್ಶನ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಿಇಒ ನಂದಿನಿ ಸೂಚಿಸಿದರು. ಜಿಲ್ಲೆಯ ಎಲ್ಲ ಶಾಲೆಯ ಅಡುಗೆ ಕೋಣೆಯ ಹತ್ತಿರ ಡಿ.31ರೊಳಗೆ ಸಹಾಯವಾಣಿ ಸಂಖ್ಯೆಯನ್ನು ಅಳವಡಿಸಬೇಕು. ಆಹಾರ ಸಾಮಗ್ರಿಗಳ ಗುಣಮಟ್ಟ ಹಾಗೂ ಆಹಾರದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಈ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದರು.
ವಿಶೇಷ ಗಮನ ಹರಿಸಿ: ಸೋಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಎಲ್ಲ ಮಕ್ಕಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಆದ್ದರಿಂದ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಆಸಕ್ತಿ ವಹಿಸಿ ಪಾಠ ಮಾಡಬೇಕು ಎಂದು ಶಾಲೆಯ ಶಿಕ್ಷಕರಿಗೆ ಸೂಚಿಸಿದರು.
7ನೇ ತರಗತಿಯ ಮಕ್ಕಳು ಸಂವಿಧಾನದ ಪೀಠಿಕೆಯನ್ನು ನೋಡದೆಯೇ ಹೇಳಿದ್ದನ್ನು ಕಂಡು ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಕೆಲವು ಮಕ್ಕಳು ಕನ್ನಡ ಪಠ್ಯವನ್ನು ಓದಲು ಕಷ್ಟಪಡುತ್ತಿದ್ದು, ಅಂತಹ ಮಕ್ಕಳಿಗೆ ಶಾಲೆಯ ಪ್ರಾರಂಭ ಹಾಗೂ ಶಾಲೆಯ ಮುಕ್ತಾಯದ ನಂತರವೂ ವಿಶೇಷ ಗಮನಹರಿಸಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕೆಯನ್ನು ಉತ್ತಮಗೊಳಿಸಲು ಕ್ರಮವಹಿಸಬೇಕು. 7ನೇ ತರಗತಿಯಿಂದಲೇ ಮಕ್ಕಳನ್ನು 10ನೇ ತರಗತಿಗೆ ತಯಾರಾಗುವಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಗುಣಮಟ್ಟದ ಆಹಾರ ಒದಗಿಸಿ
ಶಾಲೆಯ ಅಡುಗೆ ಕೋಣೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಪ್ರತಿದಿನ ಪೌಷ್ಟಿಕ ಆಹಾರ ನೀಡಬೇಕು. ಆಹಾರವು ಗುಣಮಟ್ಟದಿಂದ ಕೂಡಿರಬೇಕು ಹಾಗೂ ವಿದ್ಯಾರ್ಥಿಗಳಿಗೆ ಶುಚಿಯಾದ ಮತ್ತು ರುಚಿಯಾದ ಆಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮೊಟ್ಟೆ ನೀಡುತ್ತಿರುವ ಬಗ್ಗೆ ವಹಿಯನ್ನು ಪರಿಶೀಲಿಸಿದರು. ಪ್ರತಿ ದಿನ ಮೊಟ್ಟೆ ನೀಡುವ ಬಗ್ಗೆ ಹಾಗೂ ಯಾವ ದಿನ ಯಾವ ವಿದ್ಯಾರ್ಥಿ ಮೊಟ್ಟೆ ಸೇವಿಸುವುದಿಲ್ಲ ಎಂಬ ಬಗ್ಗೆ ಪಾಲಕರಿಂದ ಪತ್ರ ಬರೆಸಿಕೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಅಂಕಿ-ಅಂಶದಲ್ಲಿ ಹಾಗೂ ನೀಡುತ್ತಿರುವ ಆಹಾರದಲ್ಲಿ ವ್ಯತ್ಯಾಸ ಆಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಿಇಒ ಶಿಕ್ಷಕರಿಗೆ ತಿಳಿಸಿದರು.
ನಮ್ಮ ನಡಿಗೆ ಅಕ್ಷರ ದಾಸೋಹದ ಅಡುಗೆ ಮನೆ ಕಡೆಗೆ ಅಭಿಯಾನ
ಅಕ್ಷರ ದಾಸೋಹ ಯೋಜನೆಯಡಿ ಪೂರೈಕೆ ಮಾಡಲಾಗುತ್ತಿರುವ ಆಹಾರ ಸಾಮಗ್ರಿಗಳ ಗುಣಮಟ್ಟ, ಆಹಾರದ ಗುಣಮಟ್ಟ, ಆಹಾರ ಪದಾರ್ಥಗಳ ಸಂರಕ್ಷಣೆಯ ವಿಧಾನ, ಅಡುಗೆ ಕೋಣೆಯ ಶುಚಿತ್ವ, ಮೊಟ್ಟೆ ವಿತರಣೆಯ ಅಂಕಿ ಅಂಶಗಳ ಪರಿಶೀಲನೆ ಸೇರಿದಂತೆ ಇತರ ವಿಷಯಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಯ ಬಿ.ಆರ್.ಸಿ., ಸಿ.ಆರ್.ಸಿ., ಬಿಇಒ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಮ್ಮ ನಡಿಗೆ ಅಕ್ಷರ ದಾಸೋಹದ ಅಡುಗೆ ಮನೆ ಕಡೆಗೆ ಅಭಿಯಾನದಡಿ ಶಾಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಕ್ರಮವಹಿಸಬೇಕು ಎಂದು ಈಗಾಗಲೇ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಂಜುಳಾ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಲೋಕೇಶ್, ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ರವಿಕುಮಾರ್, ತಾಲೂಕು ಸಹಾಯಕ ನಿರ್ದೇಶಕಿ ರಾಜೇಶ್ವರಿ, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ್, ಗ್ರಾಪಂ ಸದಸ್ಯ ಪ್ರೀತಮ್, ಪಿಡಿಒ ಶಂಭುಲಿಂಗಯ್ಯ, ಸೋಮನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net