ಯುವಕರು ಮೊಬೈಲ್ ಗೀಳಿನಿಂದ ಹೊರಬನ್ನಿ

ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಪುಸ್ತಕಮನೆ ಅಂಕೇಗೌಡರನ್ನು ಪ್ರೊ. ಕೃಷ್ಣೇಗೌಡ ಅಭಿನಂದಿಸಿದರು. ಸಂತೋಷ್, ಸುಜಾತಾ ಅಕ್ಕಿ, ಬಿ.ವಿ.ನಂದೀಶ್ ಇದ್ದರು.
ಮೇಲುಕೋಟೆಯ ಪುತಿನ ಕಲಾಮಂದಿರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಪುಸ್ತಕಮನೆ ಅಂಕೇಗೌಡರನ್ನು ಪ್ರೊ. ಕೃಷ್ಣೇಗೌಡ ಅಭಿನಂದಿಸಿದರು. ಸಂತೋಷ್, ಸುಜಾತಾ ಅಕ್ಕಿ, ಬಿ.ವಿ.ನಂದೀಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಕರೆ
ಮೇಲುಕೋಟೆ : ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡು ಜಗತ್ತಿನ ಅತ್ಯಂತ ಶ್ರೇಷ್ಠವಾದ ಕನ್ನಡ ಭಾಷೆಯನ್ನು ಉಳಿಸಿಬೆಳೆಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡ ಹೇಳಿದರು.  
ಮೇಲುಕೋಟೆಯಲ್ಲಿ ಪು.ತಿ.ನ. ಟ್ರಸ್ಟ್, ಕನ್ನಡ ಸಂಸ್ಕೃತಿ ಇಲಾಖೆ, ಜನಪದ ಸೇವಾಟ್ರಸ್ಟ್ ಹಾಗೂ ದೃಶ್ಯ ಟ್ರಸ್ಟ್ ಜಂಟಿಯಾಗಿ ಸೋಮವಾರ ಹಮ್ಮಿಕೊಂಡಿದ್ದ ಸುಗ್ಗಿಮಕ್ಕಳ ನಾಟಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
ಇಡೀ ವಿಶ್ವದ ಮೂರು ಸಾವಿರ ಭಾಷೆಗಳಲ್ಲಿ ಕನ್ನಡಭಾಷೆಗೆ ಪ್ರಾಚೀನತೆಯಲ್ಲಿ ಐದನೇ ಸ್ಥಾನವಿದೆ. ಕನ್ನಡಭಾಷೆ  ಬೆಳವಣಿಗೆಗೆ ನಾವೆಲ್ಲ ಸಂಕಲ್ಪ ಮಾಡಬೇಕು ಶಾಲಾ ಹಂತದಿಂದಲೇ ಮಕ್ಕಳಿಗೆ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಬೇಕು, ಯುವಕರು ಮೊಬೈಲ್ ಗೀಳಿನಿಂದ ದೂರವಾಗಿ ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪುಸ್ತಕಗಳು ಜ್ಞಾನದ ಬಂಡಾರವಾಗಿದ್ದು ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತವೆ. ಈ ಕಾರಣದಿಂದಲೇ ನಾನು ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದೇನೆ, ಎಲ್ಲರೂ ನಮ್ಮ ಪುಸ್ತಕದ ಮನೆಗೆ ಬಂದು ಉಚಿತವಾಗಿ ಬಳಸಿಕೊಳ್ಳುವ ಮೂಲಕ ಜ್ಞಾನ ಹೆಚ್ಚಿಸಿಕೊಂಡು ಕನ್ನಡಭಾಷೆಯನ್ನು ಬೆಳೆಸುವ ಕೆಲಸಮಾಡಿ ಎಂದರು.  
ನೆರೆಹೊರೆಯವರೊಂದಿಗೆ ಆತ್ಮೀಯತೆಯಿಂದಿರಿ. ಪುಸ್ತಕ ಓದುವುದನ್ನು ಅಭ್ಯಾಸಮಾಡಿ ಇತರರರಿಗೂ ಸಾಧ್ಯವಾದಷ್ಟು ಪುಸ್ತಕಗಳನ್ನು ಓದಲು ಪ್ರೇರೇಪಿಸಿ ಎಂಬ ನನ್ನ ಗುರುಗಳ ಸಂದೇಶವನ್ನು ಜೀವನದಲ್ಲಿ ಪಾಲಿಸಿದ್ದೇನೆ. ಈ ಪ್ರೇರಣೆಯೇ ನನಗೆ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ನಾನು ಪ್ರಶಸ್ತಿಗಾಗಿ ಯಾವುದೇ ಅರ್ಜಿಯನ್ನೂ ಹಾಕಿಲ್ಲ. ಯಾವುದೇ ಪ್ರಶಸ್ತಿ ಬೇಕೆಂದು ಆಸೆಪಟ್ಟವನೂ ಅಲ್ಲ, ಆದರೆ ಭಾರತ ಸರ್ಕಾರವೇ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ನನಗೆ ಅಚ್ಚರಿ ಹಾಗೂ ಅಭಿಮಾನ ಮೂಡಿಸಿದೆ. ಇದಕ್ಕಾಗಿ ನಾನು ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನವೋದಯ ಸಾಹಿತ್ಯದ ರತ್ನತ್ರಯರಲ್ಲೊಬ್ಬರಾದ ನಾಡು ಕಂಡ ಶ್ರೇಷ್ಠ ಕವಿ ಪು.ತಿ.ನ ತವರು ಹಾಗೂ ಅವರದೇ ಹೆಸರಿನ ಕಲಾಮಂದಿರಲ್ಲಿ ನನ್ನನ್ನು ಕರೆಸಿ ಅಭಿನಂದಿಸಿರುವುದಕ್ಕೆ ಟ್ರಸ್ಟ್‌ಗೆ ಅಭಾರಿಯಾಗಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪು.ತಿ.ನ ಟ್ರಸ್ಟ್ ಅಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಅವರು ಮಾತನಾಡಿ, ಅಂಕೇಗೌಡರ ಪುಸ್ತಕ ಪ್ರೇಮ ಅಪ್ರತಿಮವಾದದ್ದು. ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಲಕ್ಷಾಂತರ ಪುಸ್ತಕಗಳನ್ನು ಸಂಗ್ರಹಿಸಿ ಸಾವಿರಾರು ಜನರಿಗೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿ ಕನ್ನಡಭಾಷೆ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಂಕೇಗೌಡರ ಪುಸ್ತಕಮನೆಯಲ್ಲಿ ಜಗತ್ತಿನ ಎಲ್ಲ ಭಾಷೆಗಳ ಎಲ್ಲ ವಿಚಾರಗಳ ಪುಸ್ತಕಗಳೂ ದೊರೆಯುತ್ತವೆ. ಇಂತಹ ಪುಸ್ತಕ ಸಂಗ್ರಹ ಅಸಾಧ್ಯವಾದ ಸಂಗತಿಯಾಗಿದೆ. ದೇಹದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವವರಿಂದ ಹಿಡಿದು ಎಂತೆಂತಹವರಿಗೋ ಗಿನ್ನೆಸ್ ಅವಾರ್ಡ್ ದೊರೆಯುತ್ತದೆ. ಇಂತಹ ಕಾಲಘಟ್ಟದಲ್ಲಿ ಕೇಂದ್ರ ಸರ್ಕಾರ ಪಾಂಡವಪುರ ತಾಲೂಕಿನ ಪುಸ್ತಕಪ್ರೇಮೆ ಅಂಕೇಗೌಡರನ್ನು ಗುರುತಿಸಿ ಭಾರತದ ಸರ್ವೋನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಇದು ಜನರಲ್ಲಿ ಪುಸ್ತಕಪ್ರೇಮವನ್ನು ಹೆಚ್ಚಿಸುತ್ತದೆ. ಮೇಲುಕೋಟೆಯಲ್ಲಿ ಮಕ್ಕಳ ನಾಟಕೋತ್ಸವದ ವೇಳೆ ಅಂಕೇಗೌಡರನ್ನು ಆಹ್ವಾನಿಸಿ ಅಭಿನಂದಿಸಿದ ಕ್ಷಣಗಳು ಅವಿಸ್ಮರಣೀಯವಾಗಿದೆ ಎಂದರು 
ಪಾಂಡವಪುರ ತಹಸೀಲ್ದಾರ್ ಸಂತೋಷ್, ಹಿರಿಯ ಜಾನಪದ ವಿದ್ವಾಂಸರಾದ ಸುಜಾತಾ ಅಕ್ಕಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್, ಪುತಿನ ಟ್ರಸ್ಟ್ ಸದಸ್ಯ ಗಿರೀಶ್, ಕನಗನಮರಡಿ ವಿ.ಎಸ್.ಎಸ್.ಎನ್. ಅಧ್ಯಕ್ಷ ರಾಮಕೃಷ್ಣ ಹೆಗ್ಗಡಹಳ್ಳಿ, ಕಲಾವಿದ ಹನುಮಂತು ಇದ್ದರು.
ಪಾಂಡವಪುರ ತಾಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಹಾರೋಹಳ್ಳಿ ಧನ್ಯಕುಮಾರ್ ಅವರಿಗೆ ಸುಗ್ಗಿ ರಂಗಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net