ವೈದ್ಯಕೀಯ ಕ್ಷೇತ್ರದಲ್ಲೂ ತಂತ್ರಜ್ಞಾನ ಬಳಕೆಯಾಗಲಿ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

ಮಂಡ್ಯ ನಗರದ ಮಿಮ್ಸ್‌ನಲ್ಲಿ  6ನೇ ಯುವ ಕರ್ನಾಟಕ ರಾಜ್ಯ ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘ(ಕೆಎಸ್‌ಒಜಿಎ)ದ  ಸಮ್ಮೇಳನ ಆಯೋಜಿಸಲಾಗಿತ್ತು.
ಮಂಡ್ಯ ನಗರದ ಮಿಮ್ಸ್‌ನಲ್ಲಿ 6ನೇ ಯುವ ಕರ್ನಾಟಕ ರಾಜ್ಯ ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘ(ಕೆಎಸ್‌ಒಜಿಎ)ದ ಸಮ್ಮೇಳನ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಮಿಮ್ಸ್‌ನಲ್ಲಿ ಸಮ್ಮೇಳನ
  • ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸೊಸೈಟಿ, ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಆದಿಚುಂಚನಗಿರಿ ವಿಶ್ವವಿದ್ಯಾಲಯದಿಂದ ಆಯೋಜನೆ
ಮಂಡ್ಯ: ಮೆಡಿಕಲ್ ವಿದ್ಯಾರ್ಥಿಗಳು ಕೂಡ ತಂತ್ರಜ್ಞಾನ ಬಳಕೆಯಲ್ಲಿ ಮುಂದಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸೊಸೈಟಿ, ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ‘ಮಹಿಳಾ ಆರೋಗ್ಯ-ಸಮಾಜದ ಶಕ್ತಿ’ ಘೋಷವಾಕ್ಯದೊಂದಿಗೆ ಆಯೋಜಿಸಿರುವ 6ನೇ ಯುವ ಕರ್ನಾಟಕ ರಾಜ್ಯ ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘ(ಕೆಎಸ್‌ಒಜಿಎ)ದ ಎರಡು ದಿನದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇವತ್ತಿನ ಸಮಾಜ ನಿರೀಕ್ಷೆ ಮಾಡುತ್ತಿರುವುದು ಬದಲಾವಣೆಯೊಂದಿಗೆ ಜ್ಞಾನ-ತಂತ್ರಜ್ಞಾನವಾಗಿದೆ. ಕೃತಕ ಬುದ್ದಿಮತ್ತೆ(ಎಐ) ಎಲ್ಲ ಕಡೆ ಅಳವಡಿಕೆಯಾಗುತ್ತಿದೆ. ಇದು ವೈದ್ಯಕೀಯ ಕ್ಷೇತ್ರದಲ್ಲಿಯೂ ಬಳಕೆಯಾಗಲಿ ಎಂದರು.
ತಾಯಂದಿರ ಆರೋಗ್ಯ ಚೆನ್ನಾಗಿದ್ದರೆ ಸ್ವಾಸ್ಥ್ಯ ಸಮಾಜಕ್ಕೆ ಸಕಲಶಕ್ತಿ ವೃದ್ದಿಸುತ್ತದೆ. ಕುಟುಂಬ ವ್ಯವಸ್ಥೆಯಲ್ಲಿ ತಾಯಂದಿರುವ ಸದಾ ನಗುತ್ತಿದ್ದರೆ, ಅಲ್ಲಿ ಕುಟುಂಬವಷ್ಟೇ ಅಲ್ಲದೆ ದೇವತೆಗಳು ನಗುತ್ತಾರೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂಬಂತೆ ಮನೆಯಲ್ಲಿ ಮಹಿಳೆ ಚೆನ್ನಾಗಿದ್ದರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಅದೇ ಮಹಿಳೆ ಅತ್ತರೆ ಸೂತಕದ ಛಾಯೆ ಬರುತ್ತದೆ. ಈ ಸಮ್ಮೇಳನ ಮಹಿಳಾ ಆರೋಗ್ಯ-ಸಮಾಜದ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಮಕ್ಕಳು, ತಾಯಂದಿರು ಸಂತೋಷ, ಆರೋಗ್ಯವಾಗಿದ್ದರೆ ಸಮಾಜ ಶಕ್ತಿಯುತವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ಆಹಾರ ಆಯೋಗ ಅಧ್ಯಕ್ಷ ಡಾ.ಎಚ್.ಕೃಷ್ಣ, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ಪ್ರಾಂಶುಪಾಲ ಡಾ. ಎಂ.ಹನುಮಂತಪ್ರಸಾದ್, ಏಮ್ಸ್ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ಡಿಎಚ್‌ಒ ಡಾ.ಕೆ.ಮೋಹನ್, ಕೆಎಸ್‌ಒಜಿಎ ಮುಖ್ಯ ಪೋಷಕರಾದ ಡಾ.ಎಂ.ಜಿ.ಹಿರೇಮಠ, ಡಾ.ಎಚ್.ನಾಗರಾಜ್, ಡಾ.ಶೋಭಾ ಎನ್.ಗುಡಿ, ಅಧ್ಯಕ್ಷೆ ಡಾ.ದುರ್ಗಾದಾಸ್, ಕಾರ್ಯದರ್ಶಿ ಡಾ.ಶೋಭಾ ಬೆಂಬಳಗಿ, ಮಿಮ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಕೆ.ಆರ್.ಮನೋಹರ್ ಇತರರಿದ್ದರು. ಇದೇ ಸಂದರ್ಭದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಸಂಬಂಧಪಟ್ಟ ಪರಿಕರಗಳ ವಸ್ತು ಪ್ರದರ್ಶನ ನಡೆಯಿತು. ಪ್ರಸೂತಿ ಮತ್ತು ಸ್ತ್ರೀರೋಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗಣ್ಯರು ಅಭಿನಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net