ಮಳವಳ್ಳಿ : ತಾಲೂಕಿನ ಕೊದೇನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನ ಮೇಲೆ ಡ್ಯಾಗರ್ ಚಾಕುವಿನಿಂದ ಇರಿದು ತೀವ್ರವಾಗಿ ಹಲ್ಲೆ ನಡೆಸಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಸೋಮರಾಜು(40) ಹಲ್ಲೆಗೊಳಗಾದವರು. ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಪುನೀತ್, ಪ್ರೀತಮ್, ಪಾಂಡವಪುರ ತಾಲೂಕಿನ ಪ್ರಜ್ವಲ್ ಬಂಧಿತ ಆರೋಪಿಗಳು.
ಘಟನೆ ವಿವರ: ತಾಲೂಕಿನ ಮಾರ್ಕಾಲು ಬಳಿ ಬೈಕ್‌ನಲ್ಲಿ ಸೋಮರಾಜು ತೆರಳುತ್ತಿದ್ದ ವೇಳೆ ಎದುರಿನಿಂದ ಮತ್ತೊಂದು ಬೈಕ್‌ನಲ್ಲಿ ಮೂವರು ಯುವಕರು ವೇಗವಾಗಿ ಬಂದು ಕೂದಲೆಳೆ ಅಂತರದಲ್ಲಿ ಅಪಘಾತವಾಗುವುದು ತಪ್ಪಿ ರಸ್ತೆ ಬದಿಗೆ ಎರಡೂ ಬೈಕ್‌ಗಳ ಸವಾರರು ಉರುಳಿ ಬಿದ್ದಿದ್ದಾರೆ. ಈ ವೇಳೆ ಸೋಮರಾಜು ಯುವಕರಿಗೆ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಗದರಿ ತಿಳಿ ಹೇಳಿ ಬೈಕ್ ಎತ್ತಿಕೊಂಡು ಸ್ವಗ್ರಾಮಕ್ಕೆ ತೆರಳಿದ್ದರು. ಆದರೆ ಇದರಿಂದ ಕುಪಿತಗೊಂಡಿದ್ದ ಯುವಕರು ಹಿಂಬಾಲಿಸಿಕೊಂಡು ಹೋಗಿ ಕೊದೇನಕೊಪ್ಪಲು ಗ್ರಾಮದ ತಮ್ಮ ಮನೆಯ ಜಗುಲಿಯ ಮೇಲೆ ಕುಳಿತಿದ್ದ ಸೋಮರಾಜು ಅವರ ಹೊಟ್ಟೆ ಭಾಗಕ್ಕೆ ಡ್ಯಾಗರ್ ಚಾಕುವಿನಿಂದ ಇರಿದು ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ದಿಢೀರ್ ನಡೆದ ಘಟನೆಯನ್ನು ಕಂಡ ಗ್ರಾಮಸ್ಥರು ಕೂಡಲೇ ಕಿರುಗಾವಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಪ್ರವೃತ್ತರಾದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನತ್ತಿ ಎಡೆಮುಡಿ ಕಟ್ಟಿ ಠಾಣೆಗೆ ಎಳೆತಂದಿದ್ದರು. ಹಲ್ಲೆಯಿಂದ ತೀವ್ರಗಾಯಗೊಂಡಿದ್ದ ಗಾಯಾಳುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.