ಕಿಕ್ಕೇರಿ: ಹೋಬಳಿಯ ಊಗಿನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗಪಟು ವೆಂಕಟೇಶ್ ಮಾರ್ಗದರ್ಶನದಲ್ಲಿ ಯೋಗ ದಿನವನ್ನು ಆಚರಿಸಲಾಯಿತು.
ಯೋಗದ ವಿವಿಧ ಆಸನಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟು ಮಾತನಾಡಿದ ಅವರು, ಯೋಗದಿಂದ ರೋಗಮುಕ್ತರಾಗಿ ಆರೋಗ್ಯಕರ ಬದುಕು ಕಾಣಬಹುದು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ ಲವಲವಿಕೆಯಿಂದ ಇರಲು ಭಾರತೀಯ ಪರಂಪರೆಯಲ್ಲಿ ಒಂದಾದ ಯೋಗಾಭ್ಯಾಸ ಪ್ರಮುಖವಾಗಿದೆ. ಯೋಗಭ್ಯಾಸದಲ್ಲಿರುವ ಮಹತ್ವವನ್ನು ವಿದೇಶಿಗರು ತಿಳಿದು ಕಲಿಯಲು ನಮ್ಮ ದೇಶಕ್ಕೆ ಬರುವಂತಾಗಿದೆ. ಹೀಗಾಗಿ ಆರೋಗ್ಯಕರವಾಗಿ ಬದುಕಲು ಯೋಗಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಏಕಾಗ್ರತೆ, ಜ್ಞಾಪಕಶಕ್ತಿಗೆ ಬೇಕಿರುವ ಸರಳವಾದ ವಿವಿಧ ಆಸನಗಳನ್ನು ತಿಳಿಸಿಕೊಟ್ಟರು. ಶರೀರಕ್ಕೆ ಹೆಚ್ಚು ಆಮ್ಲಜನಕ, ಸರಾಗ ರಕ್ತ ಪರಿಚಲನೆಗೆ ಉಪಯುಕ್ತ ಬಸ್ತಿ ಆಸನವನ್ನು ಕಡ್ಡಾಯವಾಗಿ ಮಾಡುವಂತೆ ತಿಳಿಸಿದರು.
ಮುಖ್ಯ ಶಿಕ್ಷಕ ಪುಟ್ಟೇಗೌಡ, ಶಿಕ್ಷಕಿ ಶಿಲ್ಪಾ, ಆರೋಗ್ಯ ಇಲಾಖೆಯ ಅನುಷಾ ಮತ್ತಿತರರಿದ್ದರು.