ತಂಬಾಕು ದುಷ್ಪರಿಣಾಮದ ಜಾಗೃತಿ ಮೂಡಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಸಲಹೆ

ಮಂಡ್ಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ತಂಬಾಕು ರಹಿತ ದಿನಾಚರಣೆ
  • ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜನೆ
ಮಂಡ್ಯ: ತಂಬಾಕು ಸೇವನೆ ಯುವಜನತೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳನ್ನು ಬೀರುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ ಆತಂಕ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವ ವಯಸ್ಸಿನಲ್ಲೇ ಯುವಜನರು ತಂಬಾಕು ಸೇವನೆಯ ದುಷ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕು ಎಂದರು.
ತಂಬಾಕು ಸೇವನೆಯಿಂದ ಯುವಜನರಲ್ಲಿ ಶ್ವಾಸಕೋಶದ ತೊಂದರೆಗಳು ಆಸ್ತಮಾ, ಬ್ರಾಂಕೈಟಿಸ್, ಉಸಿರಾಟದ ತೀವ್ರ ತೊಂದರೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಆಗಿರುತ್ತದೆ. ಹಾಗಾಗಿ ಯುವಕರಲ್ಲಿ ತಂಬಾಕು ಸೇವನೆಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಭಾರತ ಯುವಜನತೆ ಮೇಲೆ ಅವಲಂಬಿತವಾಗಿರುವ ದೇಶವಾಗಿದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ತಂಬಾಕು ಮಾರಾಟ ಮಾಡುವ ಸ್ಥಳಗಳನ್ನು ಗುರುತಿಸಿ ಮಾಹಿತಿ ಪಡೆದು ಪೊಲೀಸ್ ಇಲಾಖೆ ಅಧಿಕಾರಿಗಳು ತಂಬಾಕು ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯನ್ನು ತಂಬಾಕು ಮುಕ್ತ ಹಾಗೂ ಡ್ರಗ್ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಯುವಕರು ಆರೋಗ್ಯದ ಮೇಲೆ ಹೆಚ್ಚು ಗಮನಹರಿಸಬೇಕು. ದೈನಂದಿನ ಜೀವನದಲ್ಲಿ ಯೋಗ ಮಾಡುವುದರಿಂದ ಆರೋಗ್ಯ ಮುಕ್ತ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.
ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯೆ ಡಾ.ಜೆ.ಡಿ.ಸ್ಮಿತಾ ಮಾತನಾಡಿ, ತಂಬಾಕು ಸೇವನೆ ಮಾಡುವುದರಿಂದ ದೇಹದ ಪ್ರತಿ ಅಂಗದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ. ಧೂಮಪಾನ ಮಾಡದಿದ್ದರೂ, ಇತರರು ಬಿಡುವ ಹೊಗೆಯನ್ನು ಸೇವಿಸುವುದರಿಂದ (ಪರೋಕ್ಷ ಧೂಮಪಾನ) ಮಕ್ಕಳಲ್ಲಿ ಅಸ್ತಮಾ ಮತ್ತು ಇತರ ಸೋಂಕುಗಳು ಉಂಟಾಗುತ್ತವೆ ಎಂದು ತಿಳಿಸಿದರು.
ತಂಬಾಕಿನಲ್ಲಿರುವ ನಿಕೋಟಿನ್ ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವ ಅಪಾಯ ಹೆಚ್ಚು. ಕ್ಯಾನ್ಸರ್, ಬಾಯಿ, ಗಂಟಲು, ಅನ್ನನಾಳ, ಶ್ವಾಸಕೋಶ ಮತ್ತು ಮೂತ್ರಕೋಶ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳಿಗೆ ತಂಬಾಕು ಸೇವನೆ ಕಾರಣವಾಗುತ್ತದೆ ಎಂದರು.
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಈ.ತಿಮ್ಮಯ್ಯ, ಜಿಲ್ಲಾ ನೋಡಲ್ ಅಧಿಕಾರಿ ಇಂದ್ರಾಣಿ, ಜಿಲ್ಲಾ ಆಸ್ಪತ್ರೆಯ ಹಿರಿಯ ದಂತ ವೈದ್ಯಾಧಿಕಾರಿ ಡಾ.ಅರುಣಾನಂದ, ತಂಬಾಕು ನಿಯಂತ್ರಣ ಅಧಿಕಾರಿ ತಿಮ್ಮರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net