ಜೀತಕ್ಕಿಟ್ಟುಕೊಂಡರೆ ಮೊಕದ್ದಮೆ ದಾಖಲಿಸಿ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಹ್ಮಣ್ಯ ಸೂಚನೆ

ಮಂಡ್ಯ ನಗರದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಮಂಡ್ಯ ನಗರದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಕಾರ್ಯಾಗಾರ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ತರಬೇತಿ ಕಾರ್ಯಾಗಾರ
  • ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಆಯೋಜನೆ
ಮಂಡ್ಯ: ದೇಶದಲ್ಲಿ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ಪ್ರತಿ ಅಂಗಗಳು ಕ್ರಮ ಕೈಗೊಳ್ಳಬೇಕು. ಅದರಂತೆ ಜೀತ ಪದ್ಧತಿಯಂತಹ ಮನಸ್ಥಿತಿ ಮತ್ತು ಯಾರಾನ್ನಾದರೂ ಜೀತಕ್ಕಿಟ್ಟುಕೊಂಡರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದರೆ ಉಳಿದವರಿಗೆ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ.ಎನ್.ಸುಬ್ರಹ್ಮಣ್ಯ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜೀತ ಪದ್ಧತಿ ರದ್ದತಿ ಕಾಯ್ದೆ-1976ರ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜೀತ ಪದ್ಧತಿ ಆಚರಿಸುವವರು ಅಥವಾ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಚೋದನೆ ನೀಡುವವರ ವಿರುದ್ಧ ಯಾವುದೇ ರೀತಿಯ ದಯೆ ದಾಕ್ಷಿಣ್ಯ ಇಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ಮೂಲಕ ಜಾಗೃತಿ ಜೀತ ಪದ್ಧತಿ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸ ಪಡೆದಂತೆ ಜೀತ ಪದ್ಧತಿ ಕುಸಿಯುತ್ತಿದೆ. ಆದರೆ ಎಲ್ಲಿ ಬರಗಾಲ, ಪ್ರವಾಹ ಉಂಟಾಗುತ್ತದೆ. ಅಲ್ಲಿ ಆಹಾರದ ಸಮಸ್ಯೆ ಹಾಗೂ ಖಾಸಗಿ ಲೇವಾದೇವಿ ವ್ಯವಹಾರ ಮಾಡುವ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೀತ ಪದ್ಧತಿ ಜಾರಿಯಲ್ಲಿದೆ. ಇವತ್ತಿಗೂ ಜೀತ ಪದ್ಧತಿ ಜೀವಂತವಾಗಿ ಇರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜೀತ ಪದ್ಧತಿ ನಿರ್ಮೂಲನೆ ಸಾಮಾಜಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಪಣ ತೊಡಬೇಕು. ಸ್ವಾತಂತ್ರ್ಯ ಬಂದ ನಂತರ ಭಾರತದಲ್ಲಿ ಅನಕ್ಷರತೆ, ಮೂಢನಂಬಿಕೆ, ಬಡತನ, ಮೌಢ್ಯತೆ ಭಾರತದಲ್ಲಿ ಹೆಚ್ಚಿತ್ತು. ಅಂತಹ ಸಂದರ್ಭದಲ್ಲಿ ಜೀತ ಪದ್ಧತಿಯೂ ಕೂಡ ಹೆಚ್ಚಿತು. ಆದರೆ ಇಂದು ದೇಶದಲ್ಲಿ ಸಾಕ್ಷರತೆ ಹೆಚ್ಚಿದರೂ ಸಹ ಭಾರತದಿಂದ ಜೀತ ಪದ್ಧತಿ ನಿರ್ಮೂಲನೆಯಾಗಿಲ್ಲ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗಾತಿಯಾಗಿದೆ ಎಂದು ಹೇಳಿದರು.
ಮನುಷ್ಯನಿಂದ ಮನುಷ್ಯ ಅವನ ಇಚ್ಛೆಗೆ ಅನುಸಾರ ಶೋಷಣೆಯಿಂದ ಕಾರ್ಯ ಮಾಡಿಸಿಕೊಳ್ಳುವುದು ಕಾನೂನು ಬಾಹಿರ ಹಾಗೂ ಅಮಾನವೀಯ ಕೃತ್ಯವಾಗಿದೆ. ಜೀತ ಪದ್ಧತಿಗೆ ಪ್ರಮುಖ ಕಾರಣವೆಂದರೆ ನಮ್ಮಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ. ಕಳೆದ ಒಂದು ವರ್ಷದಿಂದ ಜಿಪಂ ಸಿಇಒ ನೇತೃತ್ವದಲ್ಲಿ ಜಿಲ್ಲೆಯನ್ನು ಜೀತ ವಿಮುಕ್ತಿಗೊಳಿಸಲು ಶ್ರಮ ವಹಿಸಿದ್ದಾರೆ. ಜೀತ ಪದ್ಧತಿಗೆ ಒಳಗಾದವರನ್ನು ಗುರುತಿಸಿ ಅವರಿಗೆ ವಿಶೇಷ ಗುರುತಿನ ಚೀಟಿ ನೀಡಿ ವಿವಿಧ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಜೀತ ಪದ್ಧತಿಗೆ ಪರೋಕ್ಷವಾಗಿ ಪ್ರಚೋದನೆ ನೀಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು. ಜೀತ ಪದ್ಧತಿಯ ಕುರಿತು ಅರಿವು ಮೂಡಿಸಬೇಕು. ಒಬ್ಬ ವ್ಯಕ್ತಿಯ ಬಡತನ, ಅನಕ್ಷರತೆ ಇನ್ನೊಬ್ಬರಿಗೆ ಬಂಡವಾಳ ಆಗಬಾರದು. ಸ್ವಾತಂತ್ರ್ಯದ ನಂತರ ಬಂದ ಸರ್ಕಾರಗಳು ದೇಶದ ಜನರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಪಡಿಸಲು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ಸಮಾಲೋಚನೆ ಮನಃಶಾಸ್ತ್ರಜ್ಞ ಪ್ರಥಮ್ ಇತರರಿದ್ದರು.

ಜಿಲ್ಲೆಯಲ್ಲಿ 84 ಜನರಿಗೆ ಸೌಲಭ್ಯ
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜೀತ ಪದ್ಧತಿಗೆ ಒಳಗಾದವರಿಗೆ ಹೇಗೆ ನೆರವು ನೀಡಬಹುದು, ಸಮಾಜದ ಮುಖ್ಯವಾಹಿನಿಗೆ ತರಬೇಕು ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಬೇಕೆಂದರೆ ಮೊದಲು ಅವರಿಗೆ ಅರಿವು ಮೂಡಿಸುವ ಕೆಲಸವಾಗಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಜಿಲ್ಲೆಯಲ್ಲಿ ಜೀತ ಪದ್ಧತಿಗೆ ಒಳಗಾದ 84 ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಸಹಕರಿಸಿದ ಪರಿಣಾಮ ನನ್ನ ಗುರುತು ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಜೀತ ವಿಮುಕ್ತಿ ಹೊಂದಿದ ವ್ಯಕ್ತಿಗೆ ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರನ್ನು ನೀಡಿ ಅವರ ಬದುಕಿಗೆ ನೆರವಾಗಿದೆ. ಅಧಿಕಾರಿಗಳು ಜೀತ ವಿಮುಕ್ತರಿಗೆ ಮಾನವ ನೆಲೆಯಿಂದ ಸ್ಪಂದಿಸಬೇಕು. ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸುವದರ ಜತೆಗೆ ಜೀತ ಪದ್ಧತಿ ಮನಸ್ಥಿತಿಯನ್ನು ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net