ಬೆಳೆ ಉಳಿಸಿಕೊಳ್ಳಲು ನಾಲೆಗಳಿಗೆ ನೀರು ಹರಿಸಿ

ಕೆಆರ್‌ಎಸ್ ಅಣೆಕಟ್ಟೆ ಅಚ್ಚುಕಟ್ಟು ನಾಲೆಗಳಿಗೆ ಒಂದು ಕಟ್ಟು ನೀರು ಹರಿಸುವಂತೆ ಆಗ್ರಹಿಸಿ ರೈತಸಂಘ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್ ಅಣೆಕಟ್ಟೆ ಅಚ್ಚುಕಟ್ಟು ನಾಲೆಗಳಿಗೆ ಒಂದು ಕಟ್ಟು ನೀರು ಹರಿಸುವಂತೆ ಆಗ್ರಹಿಸಿ ರೈತಸಂಘ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ಕಾರ್ಯಕರ್ತರ ಆಗ್ರಹ ಮೈ-ಬೆಂ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ
ಪಾಂಡವಪುರ: ವರುಣ ಅವಕೃಪೆಯಿಂದ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ತಕ್ಷಣ ಒಂದುಕಟ್ಟು ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಕಾರ್ಯಕರ್ತರು ಸೋಮವಾರ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ರೈಲ್ವೆ ನಿಲ್ದಾಣದ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ಒಂದು ಕಟ್ಟು ನೀರಿನ ಅವಶ್ಯಕತೆ ಇದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೆಆರ್‌ಎಸ್ ಅಣೆಕಟ್ಟು ಅಚ್ಚುಕಟ್ಟಿನ ನಾಲಾ ಬಯಲಿನಲ್ಲಿ ಬೆಳೆದಿರುವ ಕಬ್ಬು, ಭತ್ತ ಮತ್ತಿತರ ಬೆಳೆಗಳಿಗೆ ಒಂದು ಅಥವಾ ಎರಡು ಕಟ್ಟು ನೀರಿನ ಅವಶ್ಯಕತೆ ಇದೆ. ಈ ಬೆಳೆಗಳಿಗೆ ನೀರು ಒದಗಿಸದಿದ್ದರೆ ರೈತ ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತದೆ. ಸರ್ಕಾರ ಮತ್ತು ಜಿಲ್ಲಾಡಳಿತ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಮನುಷ್ಯ ಬದುಕಲು ಗಾಳಿ, ನೀರು ಮತ್ತು ಆಹಾರ ಬಹಳ ಮಖ್ಯವಾಗಿ ಬೇಕು. ಜನರಿಗೆ ಕುಡಿಯುವ ನೀರು ಒದಗಿಸಲು ಪ್ರಮುಖ್ಯತೆ ಕೊಡಬೇಕು. ಅದರ ಜತೆ ಆಹಾರ ಭದ್ರತೆಯು ಅಷ್ಟೇ ಮುಖ್ಯವಾಗಿದೆ. ಈ ಹಿಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ 2012ರಲ್ಲಿ ಅಣೆಕಟ್ಟೆಯಲ್ಲಿ 74 ಅಡಿ ನೀರಿನ ಸಂಗ್ರವಿದ್ದಾಗಲೂ ನಾಲೆಗಳಿಗೆ ನೀರು ಹರಿಸಿ ರೈತರ ಹಿತಕ್ಕೆ ಮನ್ನಣೆ ನೀಡಲಾಗಿತ್ತು. ಸದ್ಯ ಜಲಾಶಯದಲ್ಲಿ ಅಂದಿಗಿಂತಲೂ ಹೆಚ್ಚಿನ ನೀರಿನ ಸಂಗ್ರಹವಿದೆ. ಹೀಗಾಗಿ ನಾಲೆಗಳಿಗೆ ತಕ್ಷಣ ನೀರು ಹರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಉಪಾಧ್ಯಕ್ಷ ವೈ.ಜಿ.ರಘು, ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಮುಖಂಡರಾದ ಎಸ್.ದಯಾನಂದ್, ಅರಳಕುಪ್ಪೆ ರೂಪಾ, ಹರವು ಪ್ರಕಾಶ್, ಕೆನ್ನಾಳು ನಾಗರಾಜು, ವಿಜಯಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net