ಮಂಡ್ಯ: ಹೊಸ ಕನಿಷ್ಟ ವೇತನ ಕಾಯ್ದೆಯನ್ವಯ ವೇತನ ನೀಡಲು ಮತ್ತು ಇತರೆ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ನಗರಸಭೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸಿದ ನೌಕರರು, ಡಿಸಿಗೆ ಮನವಿ ಸಲ್ಲಿಸಿದರು. ಹಲವು ವರ್ಷದಿಂದ ಯಾವುದೇ ಸೇವಾ ಭದ್ರತೆ, ನೇರ ವೇತನ ಪಾವತಿ ಹಾಗೂ ಖಾಯಂ ಉದ್ಯೋಗದ ಭದ್ರತೆ ಇಲ್ಲದೆ ಹಗಲಿರುಳು ಎನ್ನದೆ ಮಂಡ್ಯ ನಗರದ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನೀಡಲಾಗುತ್ತಿರುವ ವೇತನ ಕನಿಷ್ಟ ಜೀವನ ನಿರ್ವಹಣೆಗೆ ಸಹ ಸಾಲದಾಗಿದೆ. ಸಾಲ ಮಾಡಿಕೊಂಡು ತುಂಬಾ ದುಸ್ಥಿತಿಯಲ್ಲಿದ್ದೇವೆ. ರಾಜ್ಯ ಸರ್ಕಾರದ ನೂತನ ಕನಿಷ್ಠ ವೇತನ ಅಧಿಸೂಚನೆಯಂತೆ ವೇತನವನ್ನು ಜಾರಿಗೊಳಿಸದಿರುವುದರಿಂದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಕೂಡಲೇ ತಾತ್ಕಾಲಿಕ ತಡೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಯು ಮೇ 22ರಂದು ಹೊರಡಿಸಿರುವ ನೂತನ ಕಾರ್ಮಿಕರ ಕನಿಷ್ಟ ವೇತನ ಅಧಿಸೂಚನೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕು. ಜಲಮಂಡಳಿಯ ಎಲ್ಲ ಹೊರಗುತ್ತಿಗೆ ನೌಕರರಿಗೆ ಹೊಸ ಕಾರ್ಮಿಕರ ಕನಿಷ್ಟ ವೇತನ ಕಾಯ್ದೆಯನ್ವಯ ವೇತನವನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು. ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರನ್ನು ನಗರಸಭೆಯ ನೌಕರರೆಂದು ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು. ಸೇವಾ ಭದ್ರತೆ ಒದಗಿಸಬೇಕು. ವೇತನವನ್ನು ನೇರ ಪಾವತಿ ಯೋಜನೆಯಡಿ ಪಾವತಿಸಬೇಕು ಎಂದು ಒತ್ತಾಯಿಸಿದರು. ಧರಣಿಗೆ ಬೆಂಬಲ ಸೂಚಿಸಿದ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ನೌಕರರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರಕ್ಕೆ ತಿಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಅಣ್ಣೇಗೌಡ, ರಾಜುಗೌಡ, ಮೋಹನ್ ಕುಮಾರ್, ಸಿದ್ದಯ್ಯ, ಅನಿಲ್‌ಕುಮಾರ್, ಪ್ರಕಾಶ್, ಜನಾರ್ದನ ಇತರರಿದ್ದರು.