ಜಲಾಶಯ ತುಂಬಿದರೆ ಬೆಳೆಗಳಿಗೆ ನೀರು

ಮದ್ದೂರು ನಗರದ ಶಿವಪುರದ ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದ ಚರಂಡಿಗಳ ಸ್ವಚ್ಛತೆಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಪಿ.ಸಂದರ್ಶ, ರಾಮಕೃಷ್ಣ, ಟಿ.ಆರ್.ಪ್ರಸನ್ನಕುಮಾರ್, ಮರಿದೇವರು, ಮೋಹನ್ ಇದ್ದರು.
ಮದ್ದೂರು ನಗರದ ಶಿವಪುರದ ಬೆಂಗಳೂರು- ಮೈಸೂರು ಹೆದ್ದಾರಿ ಪಕ್ಕದ ಚರಂಡಿಗಳ ಸ್ವಚ್ಛತೆಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಪಿ.ಸಂದರ್ಶ, ರಾಮಕೃಷ್ಣ, ಟಿ.ಆರ್.ಪ್ರಸನ್ನಕುಮಾರ್, ಮರಿದೇವರು, ಮೋಹನ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • kaveri Water
ಮದ್ದೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಹುದು. ಈ ಉದ್ದೇಶದಿಂದ ರೈತರು ಬೆಳೆ ಬೆಳೆಯಬೇಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ನಗರದ ಶಿವಪುರದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪಕ್ಕದಲ್ಲಿರುವ ಚರಂಡಿ ಸ್ವಚ್ಛತೆಗೆ ಅಂದಾಜು 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಡ್ಯಾಂಗಳಲ್ಲಿ ನೀರಿಲ್ಲದೆ ಇರುವುದರಿಂದ ಬೆಳೆಗಳನ್ನು ಬೆಳೆದು ಸಂಕಷ್ಟಕ್ಕೆ ತುತ್ತಾಗುವುದು ಬೇಡ ಎಂಬ ಉದ್ದೇಶದಿಂದ ರೈತರು ಡ್ಯಾಂನಲ್ಲಿರುವ ನೀರು ನಂಬಿಕೊಂಡು ಬೆಳೆ ಬೆಳೆಯಬೇಡಿ ಎಂದಿದ್ದಾರೆ ಎಂದರು.
ಕಳೆದ ಬಾರಿ ಈ ಸಮಯಕ್ಕೆ ಕೆಆರ್‌ಎಸ್ ಜಲಾಶಯ ಭರ್ತಿಯಾಗಿತ್ತು. ಇಂದಿನ ಪರಿಸ್ಥಿತಿಯಲ್ಲಿ 80 ಅಡಿ ನೀರಿದ್ದು, ಒಂದು ಅಡಿಯೂ ತುಂಬಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆಗೆ ನೀರು ಎಲ್ಲಿಂದ ನೀಡೋದು. ಮುಂದಿನ ದಿನಗಳಲ್ಲಿ ಮಳೆ ಬಂದು ಜಲಾಶಯ ತುಂಬಿದರೆ ಬೆಳೆಗೆ ನೀರು ಕೊಡಬಹುದು ಎಂದರು.
ತಾಲೂಕಿನ ಸಕ್ಕರೆ ಕಾರ್ಖಾನೆಗಳು 50 ರೂ. ಪ್ರೋತ್ಸಾಹ ಧನ ನೀಡದೆ ಕಾರ್ಖಾನೆಗಳು ಪ್ರಾರಂಭ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಉದಯ್, ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆಗಳು ಪ್ರೋತ್ಸಾಹ ಧನ ನೀಡದ ಕಾರಣ ಕೆಲವು ಸಮಸ್ಯೆಗಳಿವೆ. ಆದರೆ, ತಾಲೂಕಿನ ಎರಡು ಸಕ್ಕರೆ ಕಾರ್ಖಾನೆಗಳಲ್ಲಿ ಯಾವುದೇ ಸಮಸ್ಯೆಯಿಲ್ಲ. ಕೆಲ ದಿನಗಳಲ್ಲೇ ಕಾರ್ಖಾನೆಗಳು ಪ್ರಾರಂಭವಾಗಲಿದ್ದು, ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಬೆಳೆಗೆ ನೀರಿಲ್ಲ ಅಂತಾರೆ ಆದರೆ, ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ.
ನಮಗೆ ಕುಡಿಯೋಕೆ ನೀರಿಲ್ಲ. ತಮಿಳುನಾಡಿಗೆ ನೀರು ಎಲ್ಲಿಂದ ಬಿಡೋದು. ಬೆಂಗಳೂರು ಹಾಗೂ ಮಂಡ್ಯ ಸೇರಿದಂತೆ ವಿವಿಧೆಡೆಗೆ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎಸ್‌ಆರ್‌ಐ ನೋಂದಣಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ಆರೋಪ ಮಾಡುವುದು ಪ್ರತಿನಿತ್ಯದ ಕಾಯಕವಾಗಿದೆ. ಡಿ.ಕೆ.ಶಿವಕುಮಾರ್ ಸಿಎಂ ಆದ ಮೇಲೆ ಎಚ್.ಡಿ.ಕುಮಾರಸ್ವಾಮಿ ನಿದ್ದೆ ಮಾಡುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ನೋಂದಣಿಯಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಕೆಲವು ಏರಿಯಾಗಳಲ್ಲಿ ಜಾಗದ ಕೊರತೆಯಿಂದಾಗಿ ಶಾಲೆ, ಅಂಗನವಾಡಿ, ವಿವಿಧ ಕಡೆಗಳಲ್ಲಿ ಗೊಂದಲಗಳ ಬಗ್ಗೆ ತಿಳಿಸಿ ಬಳಿಕ ನೋಂದಣಿ ಮಾಡಲಾಗುತ್ತಿದೆ. ದಾಖಲೆಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿಯೇ ನೋಂದಣಿ ಮಾಡುತ್ತಿದ್ದು, ಈ ಆರೋಪ ನಿರಾಧಾರವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಮರಿದೇವರು, ಮೋಹನ್, ತಿಪ್ಪೂರು ಮನು ಸೇರಿದಂತೆ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net