ಸ್ಥಿರ ಬೆಳೆ ಉತ್ಪಾದನೆಗೆ ನೀರು, ಮಣ್ಣು ಅತ್ಯಗತ್ಯ

ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಜಾಗೃತಿ ಅಭಿಯಾನವನ್ನು ಹಿರಿಯ ವಿಜ್ಞಾನಿ ಡಾ.ಟಿ.ಕೆ.ರಾಧಾ ಉದ್ಘಾಟಿಸಿದರು.
ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಜಾಗೃತಿ ಅಭಿಯಾನವನ್ನು ಹಿರಿಯ ವಿಜ್ಞಾನಿ ಡಾ.ಟಿ.ಕೆ.ರಾಧಾ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ವಿಜ್ಞಾನಿ ಡಾ.ಟಿ.ಕೆ.ರಾಧಾ ಅಭಿಮತ
ಪಾಂಡವಪುರ: ತರಕಾರಿ, ಹಣ್ಣು, ತೆಂಗು, ಅಡಿಕೆ ಯಾವುದೇ ಬೆಳೆಯಾದರೂ ಸ್ಥಿರವಾದ ಬೆಳೆ ಉತ್ಪಾದನೆಗೆ ನೀರು, ಮಣ್ಣು ಹಾಗೂ ಪೋಷಕಾಂಶ ನೀಡುವುದು ಅತ್ಯಗತ್ಯ ಎಂದು ಹಿರಿಯ ವಿಜ್ಞಾನಿ ಡಾ.ಟಿ.ಕೆ.ರಾಧಾ ಹೇಳಿದರು.
ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮತ್ತು ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಸಮತೋಲನ ಗೊಬ್ಬರ ಬಳಕೆ’ವಿಶೇಷ ಜಾಗೃತಿ ಅಭಿಯಾನ ಉದ್ಘಾಟಿಸಿದ ಅವರು, ಮಣ್ಣಿನ ಪರೀಕ್ಷೆಯ ಮಹತ್ವ, ಹಸಿರು ಎಲೆ ಗೊಬ್ಬರದ ಬಳಕೆ ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯ ವಿಧಾನಗಳ ಕುರಿತು ಮಾತನಾಡಿದರು.
ಮಕ್ಕಳಿಗೆ ಅನ್ನದ ಜತೆಗೆ ಪೋಷಕಾಂಶವುಳ್ಳ ಆಹಾರ ನೀಡುವ ಮಾದರಿಯಲ್ಲಿಯೇ ಹಣ್ಣು ಹಾಗೂ ತರಕಾರಿ ಗಿಡಗಳಿಗೂ ಪೋಷಕಾಂಶಗಳನ್ನು ನೀಡಬೇಕಿದೆ. ಮಣ್ಣಿನ ಫಲವತ್ತತೆ ಮತ್ತು ಸುಸ್ಥಿರ ಕೃಷಿಗಾಗಿ ಸಮತೋಲನ ಪೋಷಕಾಂಶ ನಿರ್ವಹಣೆ ಅಗತ್ಯ ಎಂದರು.
ಜೈವಿಕ ಗೊಬ್ಬರಗಳ ಬಳಕೆ, ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಪ್ರದರ್ಶನಗಳ ಕುರಿತು ಡಾ.ಸಿ.ವಾಸುಗಿ ತಾಂತ್ರಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮತೋಲನ ಗೊಬ್ಬರ ಬಳಕೆಯ ಕುರಿತು ವಿಜ್ಞಾನಿ ಡಾ.ಎಂ.ಸಿ.ಕೀರ್ತಿ ವಿಶೇಷ ಉಪನ್ಯಾಸ ನೀಡಿದರು. ಕೀಟನಾಶಕಗಳ ಸುರಕ್ಷಿತ ಬಳಕೆ ಮತ್ತು ಸಸ್ಯ ಸಂರಕ್ಷಣಾ ಕಿಟ್ ಬಳಕೆ ಕುರಿತು ಬಿಎಸ್‌ಎಫ್ ಇಂಡಿಯಾ ಲಿ.ನ ಕೆ.ದೀಪಕ್‌ಗೌಡ ಮಾಹಿತಿ ನೀಡಿದರು. ಅಂತಿಮವಾಗಿ ವಿಜ್ಞಾನಿಗಳು ಹಾಗೂ ರೈತರ ನಡುವೆ ಸಂವಾದ ನಡೆಯಿತು. ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟು 164 ರೈತರು ಭಾಗವಹಿಸಿದ್ದರು. ಪಿಡಿಒ ಕೆ.ಎನ್.ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಎಂ.ಎನ್.ನಟರಾಜು, ನಿವೃತ್ತ ಶಿಕ್ಷಕ ಬೋರೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net