ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ

ಮದ್ದೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು, ದೂರು ಸ್ವೀಕಾರ ಮತ್ತು ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು. ಸುರೇಶ್‌ಬಾಬು, ಸುನೀಲ್‌ಕುಮಾರ್, ರವಿಕುಮಾರ್, ಲೇಪಾಕ್ಷಿಮೂರ್ತಿ, ಸೋಮಶೇಖರ್ ಇದ್ದರು.
ಮದ್ದೂರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲು, ದೂರು ಸ್ವೀಕಾರ ಮತ್ತು ಕುಂದು ಕೊರತೆ ಸಭೆ ಹಮ್ಮಿಕೊಳ್ಳಲಾಗಿತ್ತು. ಸುರೇಶ್‌ಬಾಬು, ಸುನೀಲ್‌ಕುಮಾರ್, ರವಿಕುಮಾರ್, ಲೇಪಾಕ್ಷಿಮೂರ್ತಿ, ಸೋಮಶೇಖರ್ ಇದ್ದರು.
Published on
ಮದ್ದೂರು: ಸರ್ಕಾರದ ಒತ್ತುವರಿ ಜಮೀನುಗಳ ಬಗ್ಗೆ ತ್ವರಿತವಾಗಿ ಸರ್ವೇ ನಡೆಸಿ ತೆರವು ಕಾರ್ಯ ಕೈಗೊಳ್ಳದ ಕಂದಾಯ ಇಲಾಖೆ ಅಧಿಕಾರಿಗೆ ವಿರುದ್ಧ ಲೋಕಾಯುಕ್ತ ಕಾಯ್ದೆ ಅನ್ವಯ ಶಿಸ್ತುಕ್ರಮ ಜರುಗಿಸುವುದಾಗಿ ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್‌ಬಾಬು ಮಂಗಳವಾರ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಇಲಾಖೆಗಳ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರ ದೂರು ಮತ್ತು ಅಹವಾಲು ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಅವರು ಮೌಖಿಕ ಎಚ್ಚರಿಕೆ ನೀಡಿದರು.
ಒತ್ತುವರಿ ಜಮೀನುಗಳನ್ನು ಗುರುತಿಸಿ ಅವುಗಳನ್ನು ತೆರವು ಮಾಡುವಲ್ಲಿ ಕಂದಾಯ ಇಲಾಖೆ ಮತ್ತು ಭೂ ದಾಖಲೆಗಳ ವಿಭಾಗದ ಅಧಿಕಾರಿಗಳು ನಿರ್ಲಕ್ಷೃ ಧೋರಣೆಗೆ ತಳೆದಿದ್ದಾರೆ ಎಂದು ತೀವ್ರ ಆಕ್ರೋಶವ್ಯಕ್ತಪಡಿಸಿದರು.
ಒತ್ತುವರಿದಾರರ ಹಣದ ಆಮಿಷಕ್ಕೆ ಬಲಿಯಾಗಿರುವ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ತೆರವು ಕಾರ್ಯ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಸಾಮಾನ್ಯ ಆರೋಪವಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಲೋಕಾಯುಕ್ತ ಕಾಯಿದೆ ಅನ್ವಯ ದೂರು ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಸರ್ಕಾರದ ಸಾವಿರಾರು ಎಕರೆ ಗೋಮಾಳ, ದೇವಾಲಯದ ಕೊಡುಗೆ ಜಮೀನು, ರಸ್ತೆ ಒತ್ತುವರಿ ಆಗಿದೆ. ಇದರಿಂದ ದೂರುದಾರರು ಮತ್ತು ಒತ್ತುವರಿದಾರರ ನಡುವೆ ಘರ್ಷಣೆಗಳು ನಡೆದು ಶಾಂತಿಭಂಗಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಕೈ ಮೀರುವುದರ ಒಳಗೆ ಒತ್ತುವರಿ ಜಮೀನುಗಳ ತೆರವು ಕಾರ್ಯ ಕೈಗೊಳ್ಳುವಂತೆ ಎಸ್.ಪಿ.ಸುರೇಶ್ ಬಾಬು ತಾಕೀತು ಮಾಡಿದರು.
ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರದ ವೇಳೆ ಒಟ್ಟು 50 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅವುಗಳಲ್ಲಿ ಭೂ ದಾಖಲೆ ವಿಭಾಗ, ಕಂದಾಯ ಇಲಾಖೆಗಳ 33 ಅರ್ಜಿಗಳನ್ನು ಹೊರತುಪಡಿಸಿ ಉಳಿದಂತೆ ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಪಿಡಿಒ, ಸಣ್ಣ ನೀರಾವರಿ, ನಗರಸಭೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ದೂರು ಸ್ವೀಕಾರ ಮಾಡಿದರು.
ಲೋಕಾಯುಕ್ತ ಡಿವೈಎಸ್ಪಿ ಸುನೀಲ್‌ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್, ಲೇಪಾಕ್ಷಿಮೂರ್ತಿ ಹಾಗೂ ಸಿಬ್ಬಂದಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ರಾಮಲಿಂಗಯ್ಯ, ನಗರಸಭೆ ಆಯುಕ್ತೆ ರಾಧಿಕಾ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net