ಮಂಡ್ಯ:ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಹೀಯಾಳಿಸುವಂತಹ ಪ್ರಕರಣ ಸಮಾಜದಲ್ಲಿ ನಡೆಯುತ್ತಿವೆ. ಇದರಿಂದ ಸಾಮಾಜಿಕ, ರಾಜಕೀಯ ಹಾಗೂ ಸರ್ಕಾರಿ ಕ್ಷೇತ್ರದಿಂದ ಸಮುದಾಯದವರು ವಿಮುಖರಾಗುವಂತಾಗಿದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯಾಧ್ಯಕ್ಷ ಜಿ.ಆರ್.ಪ್ರದೀಪ್ ಬೇಸರ ವ್ಯಕ್ತಪಡಿಸಿದರು.
ನಗರದ ಬ್ರಾಹ್ಮಣ ಸಮುದಾಯ ಭವನದಲ್ಲಿ ಮಹಾ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ವಿಪ್ರೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅವಮಾನ ಮಾಡುವ ರೀತಿಯಲ್ಲಿ ಜನಿವಾರದ ವಿಷಯ ಇಟ್ಟುಕೊಂಡು ಕಾರ್ಯತಂತ್ರ ಎಣೆದಿದ್ದಾರೆ. ಕಳೆದ 60 ವರ್ಷದಿಂದಲೂ ದಬ್ಬಾಳಿಕೆಯನ್ನು ನಡೆಸಿಕೊಂಡ ಬರಲಾಗುತ್ತಿದೆ. ಯಾವುದೇ ಅವಕಾಶಗಳು ಸಿಗದಂತೆ ರೋಸ್ಟರ್ ಸಿಸ್ಟಂ ಮತ್ತು ಜಾತಿ ವ್ಯವಸ್ಥೆಯಿಂದ ವಿಮುಖರಾಗಿ ಖಾಸಗಿ ವಲಯದತ್ತ ಮುಖ ಮಾಡಿದ್ದೇವೆ. ಇದೆಲ್ಲವನ್ನು ನೋಡಿದರೆ ಹೋರಾಟವೇ ಜೀವನ ಎಂದರು.
ಸಣ್ಣಮಕ್ಕಳಿಗೂ ಈಗ ಜನವಾರ ಎನ್ನುವ ಕೂಗು ತಟ್ಟಿದೆ. ಪರಿಣಾಮ ಅವರು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಬ್ರಾಹ್ಮಣ ಸಮುದಾಯದವರು ತಮ್ಮ ಸಮಾಜ ಉಳಿವಿಗಾಗಿ ಸಭಾಂಗಣ, ಕಟ್ಟಡಗಳನ್ನು ಕಟ್ಟಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ನಡುವೆಯೇ ಇತರೆ ಜಾತಿಗಳು ಯಶಸ್ಸು ಹಾಗೂ ಅಭಿವೃದ್ಧಿ ಹೊಂದುತ್ತಿದ್ದಾರೆ. ಪ್ರಸ್ತುತದಲ್ಲಿ ಬ್ರಾಹ್ಮಣರು ಇರುವ ಆಸ್ತಿಯನ್ನು ಕಳೆದುಕೊಂಡು ಬೆಂಗಳೂರಿನಂತಹ ನಗರದಕ್ಕೆ ಹೋಗುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ರಾಹ್ಮಣ ಸಮಾಜವು ಸಂಘಟಿತವಾಗಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇನ್ನಷ್ಟು ಬಲಿಷ್ಠವಾಗಬೇಕಾಗಿದೆ. ಯುವ ಪೀಳಿಗೆಯಲ್ಲಿ ಸಂಸ್ಕಾರ, ವೇದಪಾರಂಪರ್ಯ ಹಾಗೂ ಭಾರತೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಮಾಜದ ಏಕತೆ, ಸಹಕಾರ ಮತ್ತು ಸೇವಾಭಾವದ ಮೂಲಕ ಸಂಘಟನೆಯನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಸಂಘ ಹೊಂದಿದೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಜೋಷಿ ಮಾತನಾಡಿ, ನೆಟ್‌ವರ್ಕ್ ಸಿಸ್ಟಂನಲ್ಲಿ ಯೋಜನೆಗಳನ್ನು ರೂಪಿಸಿಕೊಂಡು ವ್ಯಾಪಾರೀಕರಣದ ಆದಾಯವು ಬ್ರಾಹ್ಮಣರಲ್ಲಿಯೇ ಉಳಿಯುವಂತೆ ಮಾಡಬೇಕು. ಇದರಿಂದ ನಮ್ಮ ಸಮುದಾಯದ ಆದಾಯವು ಹೆಚ್ಚಿ ಅಭಿವೃದ್ದಿ ಹೊಂದಬಹುದು. ದೇಶದ 22 ರಾಜ್ಯದಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ. ಇದೇ ಸಂದರ್ಭದಲ್ಲಿ ಯುವಕರ ಸಬಲೀಕರಣಕ್ಕಾಗಿ ಆಯೋಜಿಸಲಾಗುತ್ತಿರುವ ಸ್ಟಾರ್ಟ್‌ಅಪ್ ಸಮಾವೇಶ, ಉದ್ಯೋಗ ಮೇಳ ಹಾಗೂ ಬ್ರಹ್ಮ ಉದ್ಯೋಗ ಯೋಜನೆ ಆಯೋಜಿಸಲಾಗುತ್ತಿದೆ. ಯುವಜನತೆಗೆ ಉದ್ಯೋಗಾವಕಾಶಗಳು, ಸ್ವಯಂ ಉದ್ಯಮ ಹಾಗೂ ವೃತ್ತಿ ಮಾರ್ಗದರ್ಶನ ಒದಗಿಸುವ ನಿಟ್ಟಿನಲ್ಲಿ ಸಂಘವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶ್ರೀಪತಿ ಭಾರದ್ವಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಬಸರಾಳು ಮಧುಸೂಧನ್, ಮಾಧವ ಸಂಘದ ಅಧ್ಯಕ್ಷ ಸದಾಶಿವಭಟ್, ಮುಖಂಡರಾದ ಅನಂತನಾರಾಯಣ ಶಾಸ್ತ್ರೀ, ಪ್ರೇಮಾ ರಾಮಚಂದ್ರ ಹಂಬೆ, ಮಮತಾ ರಮೇಶ್, ವೆಂಕಟೇಶ್, ಭಾರತಿ, ಗೋಪಿನಾಥ್ ಇತರರಿದ್ದರು.
ಮೆರಗು ತಂದ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮದ ಅಂಗವಾಗಿ ನಡೆದ ಭರತನಾಟ್ಯ, ಭಜನೆ ಹಾಗೂ ಹಾಸ್ಯ ಕಾರ್ಯಕ್ರಮ ಸಭಿಕರ ಮನಗೆದ್ದವು. ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮಕ್ಕಳ ಹಾಗೂ ಯುವಕರ ಸಾಂಸ್ಕೃತಿಕ ಪ್ರತಿಭೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದವು. ಇದೇ ವೇಳೆ ಅನಂತನಾರಾಯಣ ಶಾಸ್ತ್ರಿ ಹಾಗೂ ಪ್ರೇಮಾ ರಾಮಚಂದ್ರ ಹಂದೆ ಅವರಿಗೆ ಭಾರ್ಗವ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಾರ್ಮಿಕ, ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಒಟ್ಟಾರೆ, ವಿಪ್ರೋತ್ಸವ ಕಾರ್ಯಕ್ರಮವು ಬ್ರಾಹ್ಮಣ ಸಮಾಜದ ಏಕತೆ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿ ಹಾಗೂ ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಗಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿತು.