ಕನ್ನಡಪರ ಸಂಘಟನೆಗಳಿಂದ ವಿಜಯೋತ್ಸವ: ಹಿಂದಿ ಪರೀಕ್ಷೆಗೆ ವಿನಾಯಿತಿಗೆ ಸ್ವಾಗತ

  ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರುನಾಡ ಸೇವಕರು ಸಂಘಟನೆಯ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದವು.
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರುನಾಡ ಸೇವಕರು ಸಂಘಟನೆಯ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದವು.
Published on

ಪ್ರಮುಖ ಮುಖ್ಯಾಂಶಗಳು

  • ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ
ಮಂಡ್ಯ: ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ಹಿಂದಿ ಪರೀಕ್ಷೆಗಳ ಅಂಕವನ್ನು ಪರಿಗಣಿಸದ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದವು.
ರೈತ ಸಭಾಂಗಣದಲ್ಲಿ ಜಮಾವಣೆಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕರುನಾಡ ಸೇವಕರು ಸಂಘಟನೆಯ ಕಾರ್ಯಕರ್ತರು, ಕುವೆಂಪು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ರಾಜ್ಯಸರ್ಕಾರದ ಕ್ರಮ ಹಿಂದಿ ಹೇರಿಕೆಯನ್ನು ತಡೆಗಟ್ಟುವುದಾಗಿದೆ ಎಂದರು.
ಹಿಂದಿ ಹೇರಿಕೆಯನ್ನು ತಡೆಗಟ್ಟಲು ಕರ್ನಾಟಕದಲ್ಲಿ ಅರ್ಧ ಶತಮಾನದಿಂದ ಹೋರಾಟ ನಡೆದಿದೆ. ಆದರೆ ಶಿಕ್ಷಣದಲ್ಲಿ 50 ಅಂಕಗಳಿಗಿದ್ದ ಹಿಂದಿ ಪರೀಕ್ಷೆಯನ್ನು ನೂರು ಅಂಕಕ್ಕೆ ಏರಿಸಲಾಗಿತ್ತು. ತ್ರಿಭಾಷ ಸೂತ್ರದ ಹೆಸರಲ್ಲಿ ಕನ್ನಡದ ಮಕ್ಕಳ ಶಿಕ್ಷಣದ ಕೊರಳಿಗೆ ಉರುಳು ಬಿಗಿಯಲಾಗಿತ್ತು. ಇದರ ಪರಿಣಾಮ ಕಳೆದ ಶೈಕ್ಷಣಿಕ ವರ್ಷದಲ್ಲಿ ಒಂದೂವರೆ ಲಕ್ಷ ಮಕ್ಕಳು ಹಿಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಶಿಕ್ಷಣದಿಂದಲೇ ವಂಚಿತರಾಗಿದ್ದಾರೆ. ಗ್ರೇಡಿಂಗ್ ಪದ್ಧತಿಯಿಂದ ಹಿಂದಿ ಹೇರಿಕೆಗೆ ತಾತ್ಕಾಲಿಕ ವಿರಾಮ ದೊರಕಿದೆ ಎಂದರು.
ಕನ್ನಡಿಗರ ಬೆಂಬಲದಿಂದಲೇ ವಿಧಾನಸಭೆ, ಲೋಕಸಭೆ ಪ್ರವೇಶಿಸಿರುವ ಕೆಲ ಜನಪ್ರತಿನಿಧಿಗಳು ಹಿಂದಿ ಪರವಾಗಿ ವಕಾಲತು ಹಾಕಿ ತಾವುಗಳು ನಾಡದ್ರೋಹಿಗಳೆಂದು ಸಾಬೀತು ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷ ಹಿಂದಿ ಹೇರಿಕೆ ಪರ ಸಮರ್ಥನೆಯ ಮೂಲಕ ತಾವುಗಳು ಕನ್ನಡದ ಹಿತಾಸಕ್ತಿಯ ವಿರುದ್ದ ಇದ್ದಾರೆಂಬುದು ಸಾಬೀತಾಗಿದೆ. ಶಿಕ್ಷಣವನ್ನು ಉದ್ಯಮ ಮಾಡಿಕೊಂಡ ಜನಪ್ರತಿನಿಧಿಗಳು ಖಾಸಗಿ ಶಿಕ್ಷಣವನ್ನು ಬೆಂಬಲಿಸಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ನಾಶಕ್ಕೆ ಟೊಂಕ ಕಟ್ಟಿದ್ದಾರೆ. ಅದರ ಭಾಗವಾಗಿ ಹಿಂದೆ ಹೇರಿಕೆಯ ನಿರ್ಲಜ್ಜತನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳು ಹಿಂದಿ ಹೇರಿಕೆ ಸಮರ್ಥಿಸುವ ಹೇಳಿಕೆಗಳನ್ನು ಹಿಂಪಡೆಯಬೇಕು. ಕರ್ನಾಟಕದ ಜನಪ್ರತಿನಿಧಿಗಳು ಕನ್ನಡಿಗರಿಗೆ ನಿಷ್ಟರಾಗಿರಬೇಕೆ ವಿನಾ ದೆಹಲಿಯಲ್ಲಿರುವ ಪಕ್ಷಗಳ ದೊರೆಗಳಿಗಲ್ಲ. ಹಿಂದಿ ಹೇರಿಕೆ ಪರ ಸಮರ್ಥನೆ ನಿಲ್ಲಿಸದಿದ್ದಲ್ಲಿ ಮುಂದಿನ ಚುನಾವಣೆಗಳಲ್ಲಿ ಕನ್ನಡ ವಿರೋಧಿಗಳನ್ನು ಮನೆಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್‌ಡಿ ಜಯರಾಂ, ಸೋಮಶೇಖರ್, ವೆಂಕಟೇಶ್, ಶಿವರಾಜಚಾರಿ, ಎಲ್. ಸಂದೇಶ್, ಎಂ.ಬಿ.ನಾಗಣ್ಣಗೌಡ, ಧನುಷ್‌ಗೌಡ, ಶ್ರೀನಿವಾಸ್, ಮಂಗಲ ಯೋಗೀಶ್, ಕೋಣನಹಳ್ಳಿ ಯೋಗೇಶ್, ಭೂತನ ಹೊಸೂರು ದೇವೇಗೌಡ, ಬಿ.ಕೆ.ಸತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net