ಗುಡಿಗೇನಹಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾದರಿ ಕಾರ್ಯ
ಮಂಡ್ಯ ತಾಲೂಕು ಗುಡಿಗೇನಹಳ್ಳಿ ಗ್ರಾಮದಲ್ಲಿ ಸರೋಜಮ್ಮ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಞಾನವಿಕಾಸ ಕಾರ್ಯಕ್ರಮ
ಮಂಡ್ಯ: ತಾಲೂಕಿನ ಗುಡಿಗೇನಹಳ್ಳಿ ಗ್ರಾಮದಲ್ಲಿ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಡಿ ಹಾಗೂ ಮಾತೃಶ್ರೀ ಡಾ.ಹೇಮಾವತಿ ಅಮ್ಮನವರ ಜನ್ಮದಿನಾಚರಣೆ ಅಂಗವಾಗಿ ಸರೋಜಮ್ಮ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನಾ ಮಾತನಾಡಿ, ದುರ್ಬಲರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಸಮಾಜದ ಕಳಕಳಿ ಬೇಕಾಗಿದೆ. ಈ ಒಂದು ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ. ಸಮಾಜಕ್ಕೆ ಅನೇಕ ರೀತಿಯ ಕೊಡುಗೆಗಳನ್ನು ನೀಡುತ್ತಾ ಬರುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಕೋಶಾಧಿಕಾರಿ ಚಂದ್ರು ಮಾತನಾಡಿ, ಸರ್ಕಾರ ಮಾಡಬೇಕಾದ ಬೃಹತ್ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಅತ್ಯಂತ ಕಳಕಳಿಯಿಂದ ಮಾಡುತ್ತಿದೆ. ನಿರ್ಗತಿಕರ ಬದುಕಿಗೆ ಆಸರೆಯಾಗುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಯೋಜನಾಧಿಕಾರಿ ಸುರೇಶ್‌ಶೆಟ್ಟಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತಾ, ವಲಯ ಮೇಲ್ವಿಚಾರಕರಾದ ಸತೀಶ್, ವಿದ್ಯಾನಂದ, ಕೃಷಿ ಮೇಲ್ವಿಚಾರಕಿ ರಾಜೇಶ್ವರಿ ಇತರರಿದ್ದರು.