ಮಕ್ಕಳು ಲಸಿಕೆಯಿಂದ ಹೊರಗುಳಿಯದಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಫೋಸ್ಟರ್ ಬಿಡುಗಡೆ ಮಾಡಲಾಯಿತು.
ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಫೋಸ್ಟರ್ ಬಿಡುಗಡೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜೂ.28ರಿಂದ ಜು.1ರವರಿಗೆ ಲಸಿಕೆ ಅಭಿಯಾನ
  • ನಗರದಲ್ಲಿ ಸಮನ್ವಯ ಸಮಿತಿ ಸಭೆ
ಮಂಡ್ಯ: ಜಿಲ್ಲಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ಜೂ.28ರಿಂದ ಜು.1ರವರಿಗೆ ನಡೆಯಲಿದೆ. ಅದರಂತೆ 0-5 ವರ್ಷದೊಳಗಿನ ಯಾವುದೇ ಮಗುವು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಕೆಲವು ಪೋಲಿಯೋ ಪ್ರಕರಣಗಳು ವರದಿಯಾಗುತ್ತಿದ್ದು, ಹೆಚ್ಚಿನ ನಿಗಾ ವಹಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಮುಂದುವರಿಸಲಾಗಿದೆ. ಪೋಲಿಯೋ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಪ್ರತಿಯೊಬ್ಬ ಪಾಲಕರು ತಪ್ಪದೇ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವುದರೊಂದಿಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಜೂ.28ರಂದು ಜಿಲ್ಲಾದ್ಯಂತ ಬೂತ್‌ಗಳಲ್ಲಿ ಲಸಿಕೆ ಹಾಕಲಾಗುವುದು. ಜೂ.29ರಿಂದ ಜು.1ರವರೆಗೆ ಲಸಿಕೆ ಹಾಕದ ಮಕ್ಕಳನ್ನು ಪತ್ತೆಹಚ್ಚಲು ಮನೆ ಮನೆಗೆ ಭೇಟಿ ನೀಡಲಾಗುವುದು. ಮನೆ ಮನೆಗೆ ತೆರಳಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ನೀಡಬೇಕು. ಯಾವುದೇ ಕಾರಣಕ್ಕೂ ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂದು ಸೂಚನೆ ನೀಡಿದರು.
ಜಿಲ್ಲೆಯನ್ನು ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಅಧಿಕಾರಿಗಳು ಯಾವುದೇ ನಿರ್ಲಕ್ಷೃ ತೋರಬಾರದು. ಲಸಿಕೆ ನಿರಾಕರಿಸುವ ಕುಟುಂಬಗಳ ಮನವೊಲಿಸಿ ಪ್ರತಿ ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಜೂನ್‌ನಲ್ಲಿ ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಒಟ್ಟು ಅಂದಾಜು 1,13, 034 ಮಕ್ಕಳಿಗೆ ಲಸಿಕೆ ಹಾಕಲು ಗುರಿ ನೀಡಲಾಗಿದ್ದು, ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 723 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಲಸಿಕಾ ದಿನದಂದು ಗುರುತಿಸಲಾದ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕೇಂದ್ರಗಳನ್ನು ತೆರೆಯಲು ಸಜ್ಜುಗೊಳಿಸಿಟ್ಟುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕಸ ವಿಲೇವಾರಿ ಮಾಡುವ ವಾಹನಗಳಲ್ಲಿ ಜಿಂಗಲ್ ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕಾ ಪಡೆಯುವಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರ ನೀಡಬೇಕು. ಲಸಿಕಾ ಕಾರ್ಯಕ್ರಮ ದಿನದಂದು ವೈದ್ಯರು ಗೈರು ಹಾಜರಾಗದಂತೆ ಭಾಗವಹಿಸಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ನಿವೃತ್ತ ಡಿಎಚ್‌ಒ ಡಾ.ಟಿ.ಎನ್.ಮರೀಗೌಡ, ಆರ್‌ಸಿಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್, ಡಿಡಿಪಿಐ ಆರ್.ಲೋಕೇಶ್, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಧಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net