ಪಾಂಡವಪುರದಲ್ಲಿ ಮುಕ್ತಾಯಗೊಳ್ಳದ ಜಲಜೀವನ, ಅಮೃತ್ ಕಾಮಗಾರಿ

ಅಮೃತ್ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗಾಗಿ ಪಾಂಡವಪುರ ಪಟ್ಟಣದಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿರುವುದು.
ಅಮೃತ್ ಯೋಜನೆಯಡಿ ಪೈಪ್‌ಲೈನ್ ಅಳವಡಿಕೆಗಾಗಿ ಪಾಂಡವಪುರ ಪಟ್ಟಣದಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ನಿಟ್ಟಿನಲ್ಲಿ
  • ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ
ಪಾಂಡವಪುರ: ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ನಿಟ್ಟಿನಲ್ಲಿ ಕೈಗೊಳ್ಳಲಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಜಲಜೀವನ ಮಿಷನ್ (ಜೆಜೆಎಂ) ಮತ್ತು ಅಮೃತ್ ಯೋಜನೆಗೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗ್ರಹಣ ಹಿಡಿದಿದ್ದು, ಇದರ ಪರಿಣಾಮ ಯೋಜನೆಯ ಉದ್ದೇಶ ಸಾಕಾರಗೊಂಡಿಲ್ಲ.
ತಾಲೂಕಿನ ಪ್ರತಿ ಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಜಲಜೀವನ ಮಿಷನ್ ಮತ್ತು ಪಟ್ಟಣ ವ್ಯಾಪ್ತಿಯ ನಾಗರಿಕರಿಗಾಗಿ ಅಮೃತ್ ಯೋಜನೆ ಕೈಗೆತ್ತಿಕೊಳ್ಳಲಾಯಿತು. 2020ರಲ್ಲಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸ್ಥಳೀಯ ಸಂಸ್ಥೆ ಆಡಳಿತಕ್ಕೆ ಹಸ್ತಾಂತರಿಸಲು ಗುತ್ತಿಗೆದಾರರಿಗೆ ಈವರೆಗೂ ಸಾಧ್ಯವಾಗಿಲ್ಲ. ಜಲಜೀವನ ಮಿಷನ್ ಯೋಜನೆಯಂತೂ ಕಳಪೆಯಾಗಿದ್ದು, ಪೈಪ್‌ಲೈನ್‌ಗಾಗಿ ಅಳವಡಿಸಲಾದ ಪೈಪುಗಳು ಗುಣಮಟ್ಟದಿಂದ ಕೂಡಿಲ್ಲ. ಇನ್ನು ಪೈಪ್‌ಗಳನ್ನು ಆಳವಾಗಿ ಹೂಳದೆ ಭೂಮಿಯ ಮೇಲ್ಮೈನಲ್ಲೇ ಹೂಳಲಾಗಿದೆ. ಕಾಮಗಾರಿಗೆ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳನ್ನು ಗುತ್ತಿಗೆದಾರರು ಸರಿಯಾಗಿ ನಿರ್ವಹಿಸಿಲ್ಲ. ಇದಕ್ಕೆ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು.
ಯೋಜನೆಯ ಮಾರ್ಗಸೂಚಿಯಂತೆ ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿತ್ತು. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ. ಬಹುತೇಕ ಗ್ರಾಮಗಳಲ್ಲಿ ಹಳೆಯ ಪೈಪ್‌ಲೈನ್ ಸಂಪರ್ಕಕ್ಕೆ ಹೊಸ ನಲ್ಲಿಗಳನ್ನು ಅಳವಡಿಸಿ ಮೀಟರ್ ಜೋಡಿಸಲಾಗಿದೆ ಎಂಬ ದೂರುಗಳಿವೆ. ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾ ರರು ತಮಗಿಷ್ಟ ಬಂದಂತೆ ಕಾಮಗಾರಿ ನಡೆಸುತ್ತಿದ್ದು, ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಇದರಿಂದಾಗಿ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರರು ಅಳವಡಿಸಿರುವ ನಲ್ಲಿಗಳು, ಮೀಟರ್ ಈಗಾಗಲೇ ಕಿತ್ತು ಬರುತ್ತಿರುವ ಪರಿಣಾಮ ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷೆ ಯೋಜನೆ ನೀರಿನಲ್ಲಿ ಹುಣಸೆ ಹಣ್ಣು ತೇಯ್ದಂತೆ ಆಗುತ್ತಿದೆ ಎಂಬುದು ಹಲವು ಗ್ರಾಮಸ್ಥರ ಅಭಿಪ್ರಾಯ.
ಹಸ್ತಾಂತರಿಸಿಕೊಳ್ಳಲು ಹಿಂದೇಟು: ಗುಣಮಟ್ಟ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಬೇಕಾಗಿದೆ. ಆದರೆ ಬಹುತೇಕ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಪರಿಣಾಮ ಸ್ಥಳೀಯ ಗ್ರಾಪಂ ಅಧಿಕಾರಿಗಳು ಕೂಡ ಹಸ್ತಾಂತರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಯೋಜನೆ ಉದ್ದೇಶ ಸಾಕಾರಗೊಳ್ಳದ ಪರಿಣಾಮ ಈ ಹಿಂದಿನ ನೀರು ಸರಬರಾಜಿನ ವ್ಯವಸ್ಥೆಯೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಮಹಿಳೆಯರು ಬಂದಿದ್ದಾರೆ. ನಲ್ಲಿಗೆ ಮೀಟರ್ ಅಳವಡಿಕೆಯಿಂದ ನೀರಿನ ವೇಗ ಕಡಿಮೆಯಾಗಿ ಸಣ್ಣ ಪ್ರಮಾಣದಲ್ಲಿ ಬೀಳುವ ಪರಿಣಾಮ ಕೆಲವೆಡೆ ಮೀಟರ್‌ಗಳನ್ನೇ ಕಿತ್ತು ಎಸೆಯಲಾಗಿದೆ. ಸಣ್ಣ-ಪುಟ್ಟ ಗ್ರಾಮದಿಂದ ದೊಡ್ಡ ಗ್ರಾಮಕ್ಕೂ ಅಗತ್ಯವಿರುವ ನಲ್ಲಿಗಳ ಜೋಡಣೆಗೆ ತಕ್ಕಂತೆ ಟೆಂಡರ್ ಮೊತ್ತ ಹೆಚ್ಚಾಗಿದ್ದು, ಪ್ರತಿ ಮನೆಗೆ ಸಾವಿರಾರು ರೂ.ವೆಚ್ಚ ಮಾಡಿ ನಲ್ಲಿ ಸಂಪರ್ಕ ಕಲ್ಪಿಸಲಾಗಿದ್ದರೂ ಈಗ ವ್ಯರ್ಥವಾಗಿದೆ.
ಇನ್ನು ಕೆಲವು ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನೆ ಮೂಲಕ ನಲ್ಲಿಗಳಲ್ಲಿ ನೀರು ಹರಿಯುತ್ತಿದ್ದರೂ ನೀರಿನ ಪ್ರೆಷರ್ ಇಲ್ಲದ ಕಾರಣ ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಹರಿಯುತ್ತಿಲ್ಲ. ಕೇವಲ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ಹರಿಯುತ್ತಿದೆ. ಅಲ್ಲಲ್ಲಿ ಪೈಪ್‌ಲೈನ್ ಸೋರಿಕೆಯಾಗುತ್ತಿದ್ದು ಇದರಿಂದಲೂ ಅಗತ್ಯ ನೀರು ಪೂರೈಕೆಯಾಗುತ್ತಿಲ್ಲ. ಸರ್ಕಾರದ ಈ ಯೋಜನೆಯಿಂದ ನಮಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೋಟ್ಯಂತರ ರೂ. ಖರ್ಚು ಮಾಡಿ ಈ ರೀತಿ ಅವೈಜ್ಞಾನಿಕ ಕಾಮಗಾರಿ ಮಾಡುವ ಬದಲು ಹಳೇ ವ್ಯವಸ್ಥೆಯನ್ನೇ ಮತ್ತಷ್ಟು ಸುಧಾರಿಸಿ ನೀರು ಪೂರೈಕೆ ಮಾಡಬಹುದಿತ್ತು ಎಂಬ ವಾದ ಕೇಳಿ ಬರುತ್ತಿವೆ.
ರಸ್ತೆಗಳು ಹಾಳು: ಪಟ್ಟಣ ವ್ಯಾಪ್ತಿಯ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕೈಗೊಂಡಿರುವ ಅಮೃತ್ ಯೋಜನೆ ಕೂಡ ಜಲಜೀವನ ಮಿಷನ್ ಯೋಜನೆ ಕಾಮಗಾರಿಗಿಂತ ಯಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ. ಈ ಯೋಜನೆ ಕೂಡ ಅವೈಜ್ಞಾನಿಕವಾಗಿದೆ. ಅಧಿಕಾರಿಗಳು ಮತ್ತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಐದು ವರ್ಷ ಪೂರ್ಣಗೊಂಡರೂ ಕಾಮಗಾರಿ ಅಂತಿಮ ರೂಪ ಪಡೆದುಕೊಂಡಿಲ್ಲ. ಪಟ್ಟಣದ ಬಹುತೇಕ ವಾರ್ಡ್‌ಗಳ ರಸ್ತೆ ತುಂಬ ಕಿರಿದಾಗಿದ್ದು, ಯೋಜನೆಗಾಗಿ ಪೈಪ್‌ಲೈನ್ ಅಳವಡಿಸಲು ರಸ್ತೆಯ ಒಂದು ಬದಿಯಲ್ಲಿ ಗುಂಡಿ ತೆಗೆದು ಪೈಪ್ ಹೂಳಲಾಗಿದೆ. ಆದರೆ ಗುಂಡಿಯನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಿ ಸಾರ್ವಜನಿಕರ ತಿರುಗಾಟಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ಇದರಿಂದ ವೃದ್ಧರು, ಅಂಗವಿಕಲರು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಜತೆಗೆ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
15ನೇ ಹಣಕಾಸು ಯೋಜನೆ, ನಗರೋತ್ಥಾನ ಯೋಜನೆಯಡಿ ಸರ್ಕಾರ ನೀಡಿದ್ದ ಅನುದಾನದಲ್ಲಿ ಪಟ್ಟಣದ ಬಹುತೇಕ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿತ್ತು. ಡಾಂಬರೀಕರಣಗೊಂಡ ಮೇಲೆ ಅಮೃತ್ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ರಸ್ತೆಗಳು ಹಾಳಾಗಿದ್ದು, ಗುಂಡಿಮಯವಾಗಿದೆ. ಅಮೃತ್ ಯೋಜನೆ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರರು ಕನಿಷ್ಠ ಗುಂಡಿ ಮುಚ್ಚುವ ಕೆಲಸವನ್ನೂ ಮಾಡಿಲ್ಲ. ಇದರಿಂದ ಪಟ್ಟಣದ ನಾಗರಿಕರಿಗೆ ಸಾಕಷ್ಟು ತೊಂದರೆ ಎದುರಾಗಿದೆ.
ಅಮೃತ್ ಯೋಜನೆ ಮಾರ್ಚ್ ಅಂತ್ಯದೊಳಗೆ ಮುಕ್ತಾಯವಾಗಲಿದ್ದು, ಯೋಜನೆಯ ಉದ್ದೇಶದಂತೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಯೋಜನೆಯ ಅನುಷ್ಠಾನಕ್ಕಾಗಿ ಅಗೆದಿರುವ ರಸ್ತೆಗಳನ್ನು ಸರಿಪಡಿಸುವವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಸ್ತೆ ನಿರ್ವಹಣೆ ಜವಾಬ್ದಾರಿ ಕೂಡ ಗುತ್ತಿಗೆದಾರರದ್ದೇ ಆಗಿದ್ದು ಆ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಸತೀಶ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ
ತಾಲೂಕಿನ 63 ಹಳ್ಳಿಗಳಿಗೆ ಈಗಾಗಲೇ ಕೆಆರ್‌ಎಸ್‌ನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. 33 ಗ್ರಾಮಗಳಿಗೆ ತೊಣ್ಣೂರು ಕೆರೆಯಿಂದ ನೀರು ಒದಗಿಸಲಾಗುತ್ತಿದೆ. ಜತೆಗೆ ಕೊಳವೆಬಾವಿ ಮತ್ತಿತರ ಜಲ ಮೂಲಗಳಿಂದ 81 ಗ್ರಾಮಗಳು ಕುಡಿಯುವ ನೀರು ಪಡೆದುಕೊಳ್ಳುತ್ತಿವೆ. ಈ ನೀರಿನ ಮೂಲವನ್ನೇ ಆಧರಿಸಿ ಜಲಜೀವನ ಮಿಷನ್ ಯೋಜನೆ ರೂಪುಗೊಂಡಿದೆ. ಆದರೆ ಈ ಯೋಜನೆ ಸಮರ್ಪಕವಾಗಿರದ ಕಾರಣ ಉಪಯೋಗಕ್ಕೆ ಬರುತ್ತಿಲ್ಲ.
ರಮೇಶ್ ಚಿನಕುರಳಿ ನಿವಾಸಿ
ಕಳೆದ ಎರಡು ವರ್ಷಗಳಿಂದ 134 ಕಾಮಗಾರಿ ಮುಗಿದಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ. ಉಳಿದ 43 ಕಾಮಗಾರಿಗಳಲ್ಲಿ ಕೆಲವು ಪ್ರಗತಿಯಲ್ಲಿವೆ. ಕಾಮಗಾರಿ ನಿರ್ವಹಣೆಗೆ ಹಣ ಬಿಡುಗಡೆಯಾಗದ ಕಾರಣ ಕೆಲ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರ ಮನವೊಲಿಸಲಾಗಿದೆ. ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಮಮತಾ ಎಇಇ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಾಂಡವಪುರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net