ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅರಿಯಿರಿ

ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಗತಿ ಹಂತದಲ್ಲಿರುವ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು  ಕೆ.ಆರ್.ನಂದಿನಿ ಪರಿಶೀಲಿಸಿದರು.
ನಾಗಮಂಗಲ ತಾಲೂಕಿನ ಬೋಗಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಗತಿ ಹಂತದಲ್ಲಿರುವ ಕುಡಿಯುವ ನೀರು ಯೋಜನೆಯ ಕಾಮಗಾರಿಗಳನ್ನು ಕೆ.ಆರ್.ನಂದಿನಿ ಪರಿಶೀಲಿಸಿದರು.
Published on
ನಾಗಮಂಗಲ: ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿನ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಪಡೆದು ಪರಿಹಾರ ಮಾಡಲು ತಾ.ಪಂ. ಇಒ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಆರ್. ನಂದಿನಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಹೊಣಕೆರೆ ಹೋಬಳಿಯ ಕೊರವನಗುಂಡಿ, ಎಸ್. ಮಲ್ಲಸಂದ್ರ, ತಿರುಗನಹಳ್ಳಿ, ಬೊಮ್ಮನಾಯಕನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳು ಮುಕ್ತಾಯಗೊಂಡು ಗ್ರಾಮಪಂಚಾಯಿತಿಗೆ ಹಸ್ತಾಂತರವಾದ ನಂತರ ಸಮಸ್ಯೆಗಳು ಎದುರಾದಲ್ಲಿ ಅವುಗಳನ್ನು ತ್ವರಿತವಾಗಿ ಸರಿಪಡಿಸುವ ನಿಟ್ಟಿನಲ್ಲಿ ನೀರುಗಂಟಿಗಳಿಗೆ ಸೂಕ್ತ ತರಬೇತಿ ನೀಡಬೇಕಾಗಿದೆ. ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿರುವ ಗ್ರಾಮಗಳಲ್ಲಿ ಸಮಸ್ಯೆ ಎದುರಾದಲ್ಲಿ ಅವುಗಳನ್ನು ಸಂಬಂಧಪಟ್ಟ ಗುತ್ತಿಗೆದಾರರೇ ಸರಿಪಡಿಸಬೇಕು. ಗ್ರಾಮ ಪಂಚಾಯಿತಿಗಳು ಪೈಪ್ ಲೈನ್ ಲೀಕೇಜ್ ಸರಿಪಡಿಸಲು ಅಗತ್ಯವಿರುವ ಎಲೆಕ್ಟ್ರೋ ಪ್ಯೂಷನ್ ಯಂತ್ರ ಮತ್ತು ಸಲಕರಣೆಗಳನ್ನು ನಿಯಮಾನುಸಾರ ಖರೀದಿಸಲು ಕ್ರಮವಹಿಸಬೇಕು. ಈ ಬಗ್ಗೆ ಜಿಲ್ಲೆಯ ಎಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳ ಸಹಾಯಕ ಕಾರ್ಯಪಾಲಕ ಅಭಿಯಂತರರು ತಾಂತ್ರಿಕ ಸಲಹೆ ಮತ್ತು ಸಹಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಬೇಕೆಂದು ಸೂಚಿಸಿದರು.
ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಬ್ಯಾಂಕ್ ಖಾತೆಗಳಿಗೆ ಗ್ರಾಮ ಪಂಚಾಯಿತಿಗಳು ಸಂಗ್ರಹಿಸಿದ ನೀರಿನ ದರವನ್ನು ಜಮೆ ಮಾಡಿ, ಆ ಮೂಲಕವೇ ನೀರು ನಿರ್ವಹಣೆಗೆ ಸಂಬಂಧಿಸಿದ ವೆಚ್ಚ ಭರಿಸಬೇಕು. ಈ ಬಗ್ಗೆ ತಾಲೂಕು ಪಂಚಾಯಿತಿ ಇಒ ಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ನೀರುಗಂಟಿಗಳಿಗೆ ಪ್ರಾಯೋಗಿಕ ತರಬೇತಿ : ಜಲ ಜೀವನ ಮಿಷನ್ ಯೋಜನೆಯಡಿ ಅಳವಡಿಸಲಾಗಿರುವ ಎಚ್‌ಡಿಪಿಇ ಪೈಪ್ ಗಳನ್ನು ಎಲೆಕ್ಟ್ರೋ ಪ್ಯೂಷನ್ ಯಂತ್ರದ ಮೂಲಕವೇ ಸರಿಪಡಿಸಬೇಕಾಗಿರುವುದರಿಂದ, ಜಿಲ್ಲೆಯ ಎಲ್ಲ ನೀರುಗಂಟಿಗಳಿಗೆ ಎಲೆಕ್ಟ್ರೋ ಪ್ಯೂಷನ್ ಯಂತ್ರ ಮತ್ತು ಸಲಕರಣೆಗಳನ್ನು ಬಳಸುವ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಬೇಕು. ಸಮಸ್ಯೆಗಳು ಎದುರಾದಲ್ಲಿ ಸ್ಥಳೀಯವಾಗಿ ನೀರುಗಂಟಿಗಳು ವಿಳಂಬ ಮಾಡದೆ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಕಾಮಗಾರಿ ತ್ವರಿತಗೊಳಿಸಿ: ಪಾಂಡವಪುರ, ನಾಗಮಂಗಲ ಮತ್ತು ಕೃಷ್ಣರಾಜಪೇಟೆ ತಾಲೂಕುಗಳ ಜನವಸತಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಎಲ್ ಆ್ಯಂಡ್ ಟಿ ಸಂಸ್ಥೆಯ ಸಿಬ್ಬಂದಿಗೆ ಸೂಚಿಸಿದರು. ಈಗಾಗಲೇ ಸಾಕಷ್ಟು ಬಾರಿ ಸೂಚಿಸಿದಾಗ್ಯೂ ಕಾಮಗಾರಿಯನ್ನು ತ್ವರಿತಗೊಳಿಸಿಲ್ಲ. ಆದ್ದರಿಂದ ನಿಮ್ಮ ವಿರುದ್ಧ ಗುತ್ತಿಗೆ ಕರಾರಿನನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ಶಾಲೆಗಳಿಗೆ ಸಿಇಒ ಭೇಟಿ: ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳಿಗೆ ಜಿ.ಪಂ. ಸಿಇಒ ಕೆ.ಆರ್. ನಂದಿನಿ ಸೋಮವಾರ ತಾಲೂಕಿನ ಬಿಂಡಿಗನವಿಲೆ ಗ್ರಾಮದ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಬಗ್ಗೆ ವರದಿ ಪಡೆದರು.
ಎಲ್ಲ ವಿಷಯಗಳಿಗೂ ವಿಶೇಷ ತರಗತಿಗಳನ್ನು ಮಾಡಬೇಕು, ಪ್ರತಿ ವಿದ್ಯಾರ್ಥಿಗೂ ವಿಶೇಷ ಗಮನ ಹರಿಸಬೇಕು, ಎಲ್ಲ ವಿದ್ಯಾರ್ಥಿಗಳಲ್ಲಿಯೂ ಆತ್ಮ ವಿಶ್ವಾಸ ತುಂಬಿ ಶೇ.100 ರಷ್ಟು ಫಲಿತಾಂಶ ಬರಲು ಎಲ್ಲ ಶಿಕ್ಷಕರು ಧನಾತ್ಮಕವಾಗಿ ಕೆಲಸ ಮಾಡಬೇಕು, 15 ದಿನಗಳಲ್ಲಿ ಯಾವುದೇ ಪ್ರಗತಿ ಕಾಣದಿದ್ದಲ್ಲಿ ನಿಮ್ಮ ವಿರುದ್ಧ ಮಾನ್ಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆರವರಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಲಾ ಗ್ರಂಥಾಲಯ ಪರಿಶೀಲನೆ: ಶಾಲೆಯಲ್ಲಿನ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಇಒ ಅವರು ಕಟ್ಟಡ ದುರಸ್ತಿಯಲ್ಲಿದ್ದು, ಮಳೆಗಾಲದಲ್ಲಿ ಸೋರಿಕೆಯಾಗುತ್ತದೆ, ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ ಆದ್ದರಿಂದ, ಬೇರೆ ಕೊಠಡಿಯನ್ನು ಗ್ರಂಥಾಲಯಕ್ಕೆ ಒದಗಿಸುವಂತೆ ಶಿಕ್ಷಕರಿಗೆ ಸೂಚಿಸಿದರು.
ಆಹಾರ ಸಾಮಗ್ರಿಗಳ ಗುಣಮಟ್ಟ ಪರಿಶೀಲಿಸಿ, ಅಕ್ಕಿ, ಬೇಳೆ, ಹಾಲಿನ ಪೌಡರ್, ಮೊಟ್ಟೆ, ಎಣ್ಣೆ ಸೇರಿದಂತೆ ಇತರ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳಿಗೆ ಶುಚಿ ಮತ್ತು ರುಚಿಯಾದ ಆಹಾರವನ್ನು ಸರಬರಾಜು ಮಾಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಬಿಸಿ ಊಟ ಯೋಜನೆಯ ಸಹಾಯಕ ನಿರ್ದೇಶಕ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅರ್ಚನಾ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net