ಎರಡು ಸಚಿವ ಸ್ಥಾನ: ಜಿಲ್ಲೆ ಅಭಿವೃದ್ಧಿಗೆ ಬಲ

ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂ., ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆ.ಎಂ.ಉದಯ್ ಚಾಲನೆ ನೀಡಿದರು. ಚಲುವರಾಜು, ನಾಗೇಶ್, ಮುತ್ತುರಾಜು, ಅಪ್ಪಾಜಿಗೌಡ, ಶಿವಮಾದಯ್ಯ ಇತರರು ಇದ್ದರು.
ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ 4 ಕೋಟಿ ರೂ., ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೆ.ಎಂ.ಉದಯ್ ಚಾಲನೆ ನೀಡಿದರು. ಚಲುವರಾಜು, ನಾಗೇಶ್, ಮುತ್ತುರಾಜು, ಅಪ್ಪಾಜಿಗೌಡ, ಶಿವಮಾದಯ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಂ.ಉದಯ್ ಹೇಳಿಕೆ

ಮದ್ದೂರು:

ನಿರೀಕ್ಷೆಯಂತೆ 2ನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನ ಸಿಕ್ಕಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ಮಂಗಳವಾರ 4 ಕೋಟಿ ರೂ., ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು.
ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ನಿರೀಕ್ಷೆಯಂತೆ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರುಗಳಿಗೆ ಸಚಿವ ಸ್ಥಾನ ಸಿಕ್ಕಿದ್ದು ಇದರಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲವರಿಗೆ ಅವಕಾಶ ತಪ್ಪಿರುವುದು ಸಹಜ. ಆದರೆ, ರಾಜ್ಯದಲ್ಲಿ 140 ಮಂದಿ ಕಾಂಗ್ರೆಸ್ ಶಾಸಕರು ಇದ್ದಾರೆ. 33 ಮಂದಿಯಷ್ಟೆ ಸಚಿವರಾಗಬಹುದು ಎಲ್ಲರಿಗೂ ಬೇಕು ಎಂದರೇ ಹೇಗೆ ಸಾಧ್ಯ. ಹೀಗಾಗಿ ಪಕ್ಷದ ವರಿಷ್ಠರು ಹಿರಿಯ ಶಾಸಕರಿಗೆ ಬೇರೆ ಅವಕಾಶ ಕಲ್ಪಿಸಿ ಕೊಡಲಿದ್ದಾರೆ ಎಂದರು.
ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಸಚಿವ ಸಂಪುಟ ವಿಸ್ತರಣೆ ಹಾಗೂ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡುವ ವೇಳೆ ಮನಸ್ತಾಪ ಉಂಟಾಗುವುದು ಮಾಮೂಲಿ. ಕೆಲವು ಶಾಸಕರು ಸಹ ಸಿಟ್ಟಿನಲ್ಲಿ ರಾಜೀನಾಮೆ ನೀಡಿದ್ದಾರೆ. ಶಾಸಕರು ನೀಡಿರುವ ರಾಜೀನಾಮೆ ಅಂಗೀಕಾರವಾಗಲ್ಲ. ಬೇಸರಗೊಂಡಿರುವ ಶಾಸಕರನ್ನು ಸಿ.ಎಂ. ಡಿ.ಕೆ.ಶಿವಕುಮಾರ್ ಮನವೊಲಿಸಲಿದ್ದಾರೆ. ಉಳಿದ ಎರಡು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ರಾಜ್ಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಲಿದ್ದಾರೆ ಎಂದರು.
ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸೋಮವಾರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಆಚರಣೆ ಇತ್ತು. ಹೀಗಾಗಿ ಅವರು ಗೈರು ಹಾಜರಾಗಿದ್ದರು. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವುದು ಸರಿಯಲ್ಲ. ಸಚಿವ ಸಂಪುಟ ವಿಸ್ತರಣೆ ಅವರು ಸೇರಿದಂತೆ ಹೈಕಮಾಂಡ್ ಮಟ್ಟದಲ್ಲಿ ನಡೆದ ಸಭೆಯಲ್ಲೇ ಅಂತಿಮ ತೀರ್ಮಾನ ಮಾಡಿ ಪಟ್ಟಿ ಮಾಡಲಾಗಿದೆ ಎಂದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯಕ್ಕೆ 100 ಅಡಿಗೂ ಹೆಚ್ಚಿನ ನೀರು ಬರುತ್ತಿದೆ. ಆದರೆ, ಸಂಪೂರ್ಣ ಭರ್ತಿಯಾದರೆ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಈಗಾಗಲೇ ಬಿತ್ತನೆ ಕಾರ್ಯ ಪ್ರಾರಂಭವಾಗಿದೆ ಹೀಗಾಗಿ ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ. ನಾಲೆಗಳ ಮೂಲಕ ಕೊನೆ ಭಾಗಕ್ಕೂ ನಿರಂತರವಾಗಿ ನೀರು ಹರಿಸಲಾಗುತ್ತಿದೆ ಎಂದರು.
ಮನ್ ಮುಲ್ ಅಧ್ಯಕ್ಷ ಸ್ಥಾನಕ್ಕೆ ಯು.ಸಿ.ಶಿವಕುಮಾರ್ ರಾಜೀನಾಮೆ ನೀಡಿದ್ದು, ಹೀಗಾಗಿ ಬುಧವಾರ ನಡೆಯಲಿರುವ ಚುನಾವಣೆಯಲ್ಲಿ ಮದ್ದೂರು ತಾಲೂಕಿಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ ಎಂದು ಶಾಸಕ ಉದಯ್ ಸ್ಪಷ್ಟಪಡಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ವಿಎಸ್‌ಎಸ್‌ಎನ್‌ಬಿ ಅಧ್ಯಕ್ಷ ನಾಗೇಶ್, ಗ್ರಾ.ಪಂ., ಮಾಜಿ ಸದಸ್ಯ ಪುಟ್ಟಸ್ವಾಮಿ, ಮುಖಂಡರಾದ ನಾಗೇಶ್, ಮುತ್ತುರಾಜ್, ಶಿವಮಾದಯ್ಯ, ಕುಮಾರ್, ಶಿವಕುಮಾರ್, ಶಿವು, ಅಪ್ಪಾಜಿಗೌಡ, ಮುತ್ತುರಾಜ್, ಆರ್.ಸಿ.ಎಸ್ ಮಹೇಶ್, ಪಿಡಬ್ಲುೃಡಿ ಎಇಇ ರಾಜೇಶ್ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net