ಹಲಗೂರಿನ ಕೆಪಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ಸಂಭ್ರಮ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿ.ಇ.ಉಮಾ, ಎಂ. ಕೆ. ಶ್ರೀನಿವಾಸ್, ಜಿ.ಎಂ.ಮಹದೇವು, ಗುಲ್ನಾಜ್ ಬಾನು, ಬಿ.ಮಹದೇವು, ಆನಂದ್ ಕುಮಾರ್, ಕುಳ್ಳೇಗೌಡ ಇತರರಿದ್ದರು.
ಹಲಗೂರು : ವಿದ್ಯಾರ್ಥಿಗಳು ವ್ಯಾಸಂಗದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಹಾಗೂ ಅವರಿಗೆ ಜೀವನದ ಕೌಶಲ ಮತ್ತು ನಿರ್ವಹಣೆ ಕಲಿಸಿಕೊಡುವುದೇ ನಿಜವಾದ ಶಿಕ್ಷಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ತಿಳಿಸಿದರು.
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೆಪಿಎಸ್ ಶಾಲಾ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲರಿಗೂ ಆಂಗ್ಲ ಮಾಧ್ಯಮದ ಅವಶ್ಯಕತೆ ಇರುವುದರಿಂದ ಈ ಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲೂ ಕೂಡ ಶಿಕ್ಷಣ ನೀಡಲಾಗುತ್ತಿದೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದೇ ಸರ್ಕಾರದ ಮುಖ್ಯ ಉದ್ದೇಶ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಹೆಚ್ಚು ಹಣ ಖರ್ಚು ಮಾಡಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಕಂಠ ಪಾಠ ಮಾಡಿ ಪುಸ್ತಕದ ಹುಳುಗಳಾಗಬಾರದು. ಎಲ್ಲ ರೀತಿಯ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಕೆ.ಶ್ರೀನಿವಾಸ್ ಮಾತನಾಡಿ, ಸಾಧಕರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದವರೇ. ಈಗ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವೆಲ್ಲ ಈಗ ಸರ್ಕಾರಿ ಉದ್ಯೋಗ ಬೇಕು, ಆದರೆ ಸರ್ಕಾರಿ ಶಾಲೆ ಬೇಡ ಎಂಬ ಮನಸ್ಥಿತಿಯಲ್ಲಿದ್ದೇವೆ. ಇದು ಸರಿಯಲ್ಲ. ಏಕೆಂದರೆ ಸರ್ಕಾರಿ ಶಾಲೆಗಳು ಕೇವಲ ಶಿಕ್ಷಣವನ್ನಲ್ಲ, ಮೌಲ್ಯಯುತ ಶಿಕ್ಷಣವನ್ನು ನೀಡುತ್ತವೆ, ಬದುಕನ್ನು ನಡೆಸುವ ಕಲೆಯನ್ನು ಕಲಿಸುತ್ತವೆ. ಪ್ರತಿ ವರ್ಷ ಕೆಪಿಎಸ್ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ನಮ್ಮ ಶಾಸಕರ ಒತ್ತಾಸೆಯಿಂದ ತಾಂತ್ರಿಕ ಶಿಕ್ಷಣ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣ ಕೂಡ ದೊರೆಯುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಹಾಗೂ ಪಾಲಕರನ್ನು ರಂಜಿಸಿದವು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ರಾಜ್ಯಮಟ್ಟದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾವನಾ ಬಿ. ಅರಸು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಜಿ.ಎಂ.ಮಹದೇವು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲ್ನಾಜ್ ಬಾನು, ಮಳವಳ್ಳಿ ಅಕ್ಷರ ದಾಸೋಹದ ನಿರ್ದೇಶಕ ಬಿ.ಮಹದೇವು, ಉದ್ಯಮಿ ಆನಂದ್ ಕುಮಾರ್, ಮುಖ್ಯ ಶಿಕ್ಷಕ ಕುಳ್ಳೇಗೌಡ, ಶಿಕ್ಷಕವೃಂದ, ಗ್ರಾಪಂ ಸದಸ್ಯರು ಸೇರಿದಂತೆ ಇತರರು ಇದ್ದರು.