ಮಂಡ್ಯ:ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಏಳಿಗೆ ಸಂಬಂಧ ಸರ್ಕಾರಕ್ಕೆ ವರದಿ ನೀಡಿದ ಪತ್ರಿಕೋದ್ಯಮ ಭೀಷ್ಮ ಪಿ.ರಾಮಯ್ಯ ಮಂಡ್ಯ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪಿ.ಜೆ.ಚೈತನ್ಯಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸಂಘದಿಂದ ಆಯೋಜಿಸಿದ್ದ ಮಾಜಿ ಎಂಎಲ್‌ಸಿ, ಹಿರಿಯ ಪತ್ರಕರ್ತ ಪಿ.ರಾಮಯ್ಯ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಆಂಗ್ಲ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಪಿ.ರಾಮಯ್ಯ ಅವರು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಅಭಿವೃದ್ಧಿಗೆ ಶ್ರಮಿಸಿದರು. ಇದರ ಸಲುವಾಗಿ ಇಡೀ ರಾಜ್ಯಾದ್ಯಂತ ಸಂಚರಿಸಿ ಪತ್ರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಫಲವಾಗಿ ಇಂದು ಈ ಪತ್ರಿಕೆಗಳ ಸಂಪಾದಕರು ಇನ್ನೂ ಪತ್ರಿಕೆಗಳನ್ನು ನಡೆಸುವಂತಾಗಿದೆ ಎಂದು ಸ್ಮರಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ ಮಾತನಾಡಿ, ಪಿ.ರಾಮಯ್ಯ ಅವರು ಪತ್ರಿಕೋದ್ಯಮದಲ್ಲಿ ಮಂಡ್ಯ ಜಿಲ್ಲೆಯ ಹೆಸರನ್ನು ಅತಿ ಎತ್ತರಕ್ಕೆ ಕೊಂಡೊಯ್ದವರು. ರಾಜ್ಯಾದ್ಯಂತ ಸಂಚರಿಸಿ ಸಣ್ಣ, ಮಧ್ಯಮ ಪತ್ರಿಕೆಗಳ ಹಿತ ಕಾಯುವ ಸಲುವಾಗಿ ಅವುಗಳ ಅಭ್ಯುದಯಕ್ಕೆ ಶ್ರಮಿಸಿ ಸಾಕಷ್ಟು ಸವಲತ್ತುಗಳನ್ನು ಒದಗಿಸಿದರು. ಪತ್ರಕರ್ತರಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾದ ಮೊದಲಿಗರು. ಅವರ ನಂತರ ಈಗ ಶಿವಕುಮಾರ್ ಅವರು ವಿಧಾನಪರಿಷತ್ತಿಗೆ ಆಯ್ಕೆಯಾಗಿ ಅವರ ಹಾದಿಯಲ್ಲಿ ಸಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಪತ್ರಿಕೆಗಳ ಉಳಿವಿಗೆ ಅವರು ನೀಡಿದ ವರದಿಯನ್ನು ಸರ್ಕಾರಗಳು ಇನ್ನೂ ಜಾರಿ ಮಾಡಿಲ್ಲ. ಆದರೆ ಅದರ ಆಧಾರದ ಮೇಲೆ 2013ರಲ್ಲಿ ಜಾಹೀರಾತು ನೀತಿ ಹೊರಡಿಸಿದೆ. ಸರಕಾರಗಳು ಜಾಹೀರಾತು ಮೂಲಕ ಪತ್ರಿಕೆಗಳಿಗೆ ಉತ್ತೇಜನ ನೀಡುವಂತೆ ಮಾಡಲು ಅವರ ವರದಿಗಳು ಕಾರಣ. ಸರಕಾರ ಅವರ ಹೆಸರಿನಲ್ಲಿ ನಿಧಿ ಸ್ಥಾಪಿಸಬೇಕು. ಈ ಮೂಲಕ ಪ್ರತಿ ವರ್ಷ ಅವರ ಹೆಸರಿನಲ್ಲಿ ಪತ್ರಕರ್ತರಿಗೆ ಪ್ರಶಸ್ತಿ ನೀಡುವಂತಾಗಬೇಕೆಂದು ಒತ್ತಾಯಿಸಿದರು.
ಹಿರಿಯ ಪತ್ರಕರ್ತ ಎ.ಎಲ್.ಬಸವೇಗೌಡ ಮಾತನಾಡಿ, ಪತ್ರಿಕೋದ್ಯಮದ ಭೀಷ್ಮ ಪಿ.ರಾಮಯ್ಯ ಅವರು ಸಣ್ಣ, ಮಧ್ಯಮ ಪತ್ರಿಕೆಗಳನ್ನು ಮೇಲಕ್ಕೆತ್ತುವ ಹೆಗ್ಗಳಿಕೆ ಉಳ್ಳವರು, ಇಂಗ್ಲೀಷ್ ಪತ್ರಿಕೆಯಲ್ಲಿ ವೃತ್ತಿ ಮಾಡುತ್ತಿದ್ದರೂ ಸಣ್ಣ, ಮಧ್ಯಮ ಪತ್ರಿಕೆಗಳ ಪರವಾಗಿ ಮಾನವೀಯ ಮೌಲ್ಯಗಳನ್ನು ಉಳ್ಳವರಾಗಿದ್ದರು ಎಂದು ಶ್ಲಾಘಿಸಿದರು.
ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಪತ್ರಿಕೋದ್ಯಮದ ಮೂಲಕ 8 ರಿಂದ 10 ಜನ ರಾಜಕೀಯ ಪ್ರವೇಶ ಮಾಡಿದವರಿದ್ದಾರೆ. ಆದರೆ ಖಾದ್ರಿ ಶಾಮಣ್ಣ, ಹಾಗೂ ಪಿ.ರಾಮಯ್ಯ ಅವರು ಮಂಡ್ಯದವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಪಿ.ರಾಮಯ್ಯ ಅವರ ಸಣ್ಣ, ಮಧ್ಯಮ ಪತ್ರಿಕೆಗಳ ಬಗೆಗಿನ ಕಾಳಜಿ ಮಹತ್ತರವಾದದರು ಎಂದು ಸ್ಮರಿಸಿದರು.
ಜಿಲ್ಲಾಧ್ಯಕ್ಷ ಕೆ.ಎನ್.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಡಿ.ಶಶಿಧರ್ ಕಾಡುಕೊತ್ತನಹಳ್ಳಿ, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ರವಿ ಸಾವಂದಿಪುರ, ರಾಷ್ಟ್ರೀಯ ಸಮಿತಿ ಸದಸ್ಯರಾದ ಎಂ.ಎಸ್.ಶಿವಪ್ರಕಾಶ್, ಬಸವರಾಜ ಹೆಗ್ಗಡೆ ಇತರರಿದ್ದರು.