ಬೇಸಾಯದೊಂದಿಗೆ ಅರಣ್ಯ ಕೃಷಿ ಸಂಯೋಜಿಸಿ: ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಸಲಹೆ

ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಮಾತನಾಡಿದರು.
ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಕೃಷಿ ಕುರಿತು ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ
  • ವಿ.ಸಿ ಫಾರ್ಮ್‌ನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜನೆ
ಮಂಡ್ಯ: ರೈತರು ಬೇಸಾಯದೊಂದಿಗೆ ಅರಣ್ಯ ಕೃಷಿಯನ್ನು ಸಂಯೋಜಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಕಿವಿಮಾತು ಹೇಳಿದರು.
ತಾಲೂಕಿನ ವಿ.ಸಿ ಫಾರ್ಮ್‌ನ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ಅರಣ್ಯ ಕೃಷಿ ಕುರಿತು ರೈತರಿಗಾಗಿ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯೊಂದಿಗೆ ಅರಣ್ಯ ಬೆಳೆಗಳನ್ನು ಸಂಯೋಜನೆ ಮಾಡುವುದರಿಂದ ರೈತರಿಗೆ ಮೇವು, ಟಿಂಬರ್, ಇಂಧನ ಹಾಗೂ ಮಣ್ಣಿನ ಸಾರುತ್ವ ಹೆಚ್ಚಳ ಸೇರಿದಂತೆ ಅನೇಕ ಲಾಭಗಳು ದೊರೆಯುತ್ತವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಶೋಧನಾ ನಿರ್ದೇಶಕ ಡಾ.ಜಿ.ಎಂ.ದೇವಗಿರಿ ಮಾತನಾಡಿ, ಅರಣ್ಯ ಕೃಷಿ ಮೂಲಕ ಪರಿಸರ ಸಂರಕ್ಷಣೆ ಹಾಗೂ ರೈತರಿಗೆ ಹೆಚ್ಚುವರಿ ಆದಾಯದ ಅವಕಾಶಗಳು ಲಭ್ಯವಾಗುತ್ತವೆ. ಭಾರತದಲ್ಲಿನ ಕಾರ್ಬನ್ ಕ್ರೆಡಿಟಿಂಗ್ ಹಾಗೂ ಅರಣ್ಯ ನೀತಿಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ರೈತರು ವಿಶ್ವವಿದ್ಯಾಲಯದ ವಿವಿಧ ಸೇವೆಗಳನ್ನು ಬಳಸಿಕೊಂಡು ಅರಣ್ಯ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಚಂದ್ರಪ್ಪ, ಸಹ ಸಂಶೋಧನಾ ನಿರ್ದೇಶಕ ಡಾ.ಬಸವರಾಜು, ಕೃಷಿ ವಿಜ್ಞಾನಿಗಳಾದ ಡಾ.ಸತೀಶ್, ಡಾ.ಎಸ್.ರಾಘವೇಂದ್ರ, ಡಾ.ರೂಪಾ, ಡಾ.ಟಿ.ಪಿ.ಭರತ್‌ಕುಮಾರ್, ಡಾ.ಬಿಂದು ಇತರರಿದ್ದರು.
ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಡಾ.ಕೆ.ನಾಗಭೂಷಣ್ ಮೈದಾನ ಪ್ರದೇಶಕ್ಕೆ ಸೂಕ್ತವಾದ ವಿವಿಧ ಅರಣ್ಯ ಜಾತಿಗಳು ಹಾಗೂ ಅವುಗಳ ಬೇಸಾಯ ವಿಧಾನಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಮಳವಳ್ಳಿ ತಾಲೂಕಿನ ಕೃಷಿ ಅರಣ್ಯ ಅಳವಡಿಸಿಕೊಂಡಿರುವ ಪ್ರಗತಿಪರ ರೈತ ಪುಟ್ಟಸ್ವಾಮಿ ತಮ್ಮ ಅನುಭವವನ್ನು ಹಂಚಿಕೊಂಡರು. ತರಬೇತಿ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ರೈತರು ಭಾಗವಹಿಸಿ ಕೃಷಿ ಅರಣ್ಯ ಪದ್ಧತಿಗಳ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net