ಬದುಕಿಗೆ ಕಾನೂನಿನ ಅರಿವು ಅಗತ್ಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಸಲಹೆ

ಮಂಡ್ಯ ನಗರದ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಅರೆಕಾಲಿಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮಂಡ್ಯ ನಗರದ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಅರೆಕಾಲಿಕ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅರೆಕಾಲಿಕ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ತರಬೇತಿ
  • ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜನೆ
  • ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಭಾಗಿ
ಮಂಡ್ಯ: ಪ್ರತಿ ವ್ಯಕ್ತಿಗೂ ಕಾನೂನಿನ ಬಗ್ಗೆ ಅರಿವು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಸಲಹೆ ನೀಡಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಔಟ್ ಲಾರ್ಡ್ ಇಂಡಿಯಾ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಸಹ ಸಂಪೂರ್ಣವಾದ ಕಾನೂನು ವ್ಯವಸ್ಥೆ ಹಾಗೂ ತಮ್ಮ ಹಕ್ಕುಗಳ ಬಗ್ಗೆ ಸ್ಪಷ್ಟ ಅರಿವು ಇಲ್ಲದಿರುವುದು ವಿಷಾಧಕರ ಸಂಗತಿ ಎಂದು ಹೇಳಿದರು.
ನ್ಯಾಯಾಲಯಕ್ಕೆ ಬರುವ ಬಹುತೇಕ ಜನರು, ಕಾನೂನಿಗೆ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂಬ ಮಾತು ಹೇಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರೆಕಾಲಿಕ ಸಿಬ್ಬಂದಿ ಹಾಗೂ ಸ್ವಯಂಸೇವಕರ ಮೂಲಕ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಮುಂದಾಗಿದೆ. ಅರೆಕಾಲಿಕ ಸ್ವಯಂಸೇವಕರು ಜನನ ಪ್ರಮಾಣಪತ್ರ, ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಹಾಯ ಮಾಡುವುದರ ಜತೆಗೆ ಆಧಾರ್ ಕಾರ್ಡ್ ಇಲ್ಲದವರನ್ನು ಗುರುತಿಸಿ ಅವರಿಗೆ ಕಾನೂನಾತ್ಮಕವಾಗಿ ಮಾಡಿಸಿಕೊಡುತ್ತಾರೆ. ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರತಿ ಹಂತದಲ್ಲೂ ಅಗತ್ಯವಾಗಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರೆಗೆ ಆಧಾರ್ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಕರು ಉಚಿತ ಕಾನೂನು ನೆರವು ನೀಡುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ನಾಗಲಕ್ಷ್ಮೀ, ಔಟ್ ಲಾರ್ಡ್ ಇಂಡಿಯಾ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿಗಳಾದ ಶಮಾ, ನಿಹಾರಿಕಾ ನಾಯ್ಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಭವ್ಯಾ, ಶಾಲಿನಿ, ಅನುಷಾ, ಸುಪ್ರಿಯಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net