ಚರ್ಮ ವಾದ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಚರ್ಮವಾದ್ಯಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಕೆ.ಎಂ.ವಸುಂಧರಾ ವಿತರಿಸಿದರು. ಡಿ.ಪಿ.ಸ್ವಾಮಿ, ಎಲ್.ನಾಗರಾಜು, ಕೀಲಾರ ಕೃಷ್ಣೇಗೌಡ, ಸಿ.ಮಂಜುನಾಥ್, ಚಾಮನಹಳ್ಳಿ ಮಂಜು ಇದ್ದರು.
ಮದ್ದೂರು: ಚರ್ಮವಾದ್ಯ ತರಬೇತಿ ಪಡೆಯುವುದರಿಂದ ಸಂಸ್ಕೃತಿ ಉಳಿಸುವ ಜತೆಗೆ ಯುವಕರು ಉದ್ಯೋಗ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಕೆ.ಎಂ.ವಸುಂಧರಾ ತಿಳಿಸಿದರು.
ತಾಲೂಕಿನ ಚಾಮನಹಳ್ಳಿ ಲಿಡ್ಕರ್ ಭವನದಲ್ಲಿ ಬೆಂಗಳೂರಿನ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್ ರಾಂ ಸಂಘಗಳ ಒಕ್ಕೂಟ, ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಸೋಮವಾರ ಸಂಜೆ ಆಯೋಜಿಸಿದ್ದ ಚರ್ಮ ವಾದ್ಯ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಶಸ್ತಿ ಪತ್ರ ಹಾಗೂ ಚರ್ಮವಾದ್ಯ ಪರಿಕರ ವಿತರಿಸಿ ಮಾತನಾಡಿದರು.
ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ(ಎಸ್ಸಿ) ಚರ್ಮ ಕುಶಲಕರ್ಮಿಗಳ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಕೌಶಲ ತರಬೇತಿ, ಸಾಲ ಸೌಲಭ್ಯ, ಮತ್ತು ಚರ್ಮ ಉತ್ಪನ್ನಗಳ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತದೆ ಎಂದರು.
ಚರ್ಮ ಕುಶಲಕರ್ಮಿಗಳಿಗೆ ತರಬೇತಿ ನೀಡಿ, ಸುಧಾರಿತ ಉಪಕರಣಗಳನ್ನು ಒದಗಿಸಿ, ಅವರು ತಯಾರಿಸಿದ ಉತ್ಪನ್ನಗಳಿಗೆ (ಲಿಡ್ಕರ್ ಬ್ರಾಂಡ್ ಹೆಸರಿನಲ್ಲಿ) ಮಾರುಕಟ್ಟೆ ಒದಗಿಸುವ ಮೂಲಕ ಸ್ವಯಂ ಉದ್ಯೋಗವನ್ನು ಉತ್ತೇಜಿಸಲಾಗುವುದು ಎಂದರು.
ರಾಜ್ಯದಲ್ಲಿ ಈಗಾಗಲೇ ಸುಮಾರು 18 ಮಳಿಗೆಗಳನ್ನು ಆರಂಭಿಸಿದ್ದು, ಶೀಘ್ರವಾಗಿ ಮಂಡ್ಯದಲ್ಲೂ ಜೂನ್ ತಿಂಗಳಲ್ಲಿ ಲಿಡ್ಕರ್ ಮಳಿಗೆಯನ್ನು ಆರಂಭಿಸಲು ನಿಗಮದ ವತಿಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಿಗಮ ಚರ್ಮವಾದ್ಯ ತರಬೇತಿ ನೀಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತರಬೇತಿ ಪಡೆದ ಯುವಕರಿಗೆ ಇದೆ ವೇಳೆ ಕಿವಿಮಾತು ಹೇಳಿದರು.
ತಮಟೆಯು ನಮ್ಮ ಸಂಸ್ಕೃತಿಯ ಸಂಕೇತ ಹಾಗೂ ಪ್ರತಿಭಟನೆ, ಭಕ್ತಿ, ಕೋಪ, ಆಕ್ರೋಶ ಸೇರಿದಂತೆ ಹಲವು ವಿಷಯಗಳಿಗೆ ತಮಟೆ ಸಾಕ್ಷಿಯಾಗಿದೆ ಎಂದರು.
ಹಲವಾರು ತಂಡಗಳು ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಹೋಗಿ ಜನಪದ ಪ್ರದರ್ಶನಗಳನ್ನು ನೀಡಿ ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿರುವುದು ಮೆಚ್ಚುಗೆಯ ವಿಷಯ ಎಂದರು.
ತಮಟೆ ವಾದ್ಯವು ಸಾಂಸ್ಕೃತಿಕ, ಶ್ರೀಮಂತಿಕೆ, ಗಾಂಭೀರ್ಯ ಹಾಗೂ ಪರಂಪರೆ ಸೂಚಿಸುತ್ತದೆ. ತರಬೇತಿ ಪಡೆದ ಯುವಕರು ಬೇರೆಯವರಿಗೂ ತರಬೇತಿ ನೀಡಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಜಾನಪದ ಕಲೆಗಳು ತನ್ನದೆಯಾದ ಮಹತ್ವ ಹೊಂದಿವೆ. ಜತೆಗೆ ವ್ಯಕ್ತಿಯ ಬದುಕು ರೂಪಿಸಿಕೊಳ್ಳಲು ಹಾಗೂ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಿದೆ. ನಿರಂತರ ಪರಿಶ್ರಮ ಪಟ್ಟರೆ ಯಾವುದೇ ಕಲೆಯಲ್ಲೂ ಯಶಸ್ವಿಯಾಗಿ ಜನ ಪ್ರಸಿದ್ಧಿ ಪಡೆಯಬಹುದು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ನಾಡು ಹಾಗೂ ದೇಶ ಕಲೆಗಳ ಮೇಲೆ ನಿಂತಿದೆ. ಕಲೆಗಳು ಮನಸಿನ ಒತ್ತಡ ನಿವಾರಣೆ ಮಾಡಿ, ಉತ್ತಮ ವ್ಯಕ್ತಿತ್ಚ ರೂಪಿಸುತ್ತದೆ ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೆ.ಎಂ.ಕೃಷ್ಣೇಗೌಡ ಮಾತನಾಡಿ, ಅಳಿವಿನಂಚಿರುವ ಜನಪದ ಕಲೆಗಳನ್ನು ಉಳಿಸಲು ಮತ್ತು ಪ್ರೋತ್ಸಾಹಿಸಲು ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯವಶ್ಯಕ ಎಂದರು.
ತರಬೇತಿದಾರ ಸಿ.ಮಂಜುನಾಥ್ ಮಾತನಾಡಿ, ತರಬೇತಿ ಪಡೆದ ಯುವಕರಿಗೆ ಹಲವು ರೀತಿಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಇದರ ಪ್ರಯೋಜನ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ಡಾ.ಬಾಬು ಜಗಜೀವನ್ ರಾಮ್ ಸಂಘ ಚಾಮನಹಳ್ಳಿ ಮಂಜು ಮಾತನಾಡಿ, ಒಂದು ತಿಂಗಳ ಕಾಲ ನಡೆದ ತರಬೇತಿ ಕಾರ್ಯಾಗಾರದಲ್ಲಿ ಹಲವು ಯುವಕರು ಅತ್ಯಂತ ಆಸಕ್ತಿಯಿಂದ ತರಬೇತಿ ಪಡೆದರು ಎಂದು ಹರ್ಷ ವ್ಯಕ್ತಪಡಿಸಿದರು.
ನಿಗಮದ ಜಿಲ್ಲಾ ಸಂಚಾಲಕ ಚೇತನ್, ಮುಖಂಡರಾದ ಪುಟ್ಟರಂಗಯ್ಯ, ಗುರುರಾಜ್, ಕಿರಣ್, ಲತಾಕುಮಾರಿ, ಹನುಮಂತು, ಆನಂದ್, ವಿನಯ್, ಕೇಶವ ಇತರರು ಇದ್ದರು.