ಶ್ರೀ ನಾರಾಯಣಸ್ವಾಮಿಗೆ ತೀರ್ಥಸ್ನಾನ

ಶ್ರೀನಾರಾಯಣಸ್ವಾಮಿ ಭೂಲೋಕದಲ್ಲಿ ಅವತರಿಸಿದ ಮೀನ-ಚೈತ್ರ ಮಾಸದ ಹಸ್ತನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು
ಶ್ರೀನಾರಾಯಣಸ್ವಾಮಿ ಭೂಲೋಕದಲ್ಲಿ ಅವತರಿಸಿದ ಮೀನ-ಚೈತ್ರ ಮಾಸದ ಹಸ್ತನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು
Published on
ಮೇಲುಕೋಟೆ: ಶ್ರೀನಾರಾಯಣಸ್ವಾಮಿ ಭೂಲೋಕದಲ್ಲಿ ಅವತರಿಸಿದ ಮೀನ-ಚೈತ್ರ ಮಾಸದ ಹಸ್ತನಕ್ಷತ್ರದ ಶುಭದಿನವಾದ ಗುರುವಾರ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವದ ತೀರ್ಥಸ್ನಾನ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಕಲ್ಯಾಣಿಯ ನಾಲ್ಕು ಕಡೆಯ ಸೋಪಾನಗಳು, ಸಾಲುಮಂಟಪಗಳ ಮೇಲ್ಭಾಗ ಧಾರಾಮಂಟಪಗಳ ಮೇಲೆ ಕಿಕ್ಕಿರಿದು ಭಕ್ತರು ಸೇರಿದ್ದರು. ಐವತ್ತು ಸಾವಿರಕ್ಕೂ ಹೆಚ್ಚಿದ್ದ ಭಕ್ತರ ಜಯಘೋಷಗಳ ನಡುವೆ ಸ್ನಪನಶೆಲ್ವರಿಗೆ ಭಕ್ತರ ಇಷ್ಟಾರ್ಥ ಈಡೇರಿಕೆ, ನಾಡಿನ ಸುಭೀಕ್ಷೆ, ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಮಂಗಳವಾದ್ಯ ಮತ್ತು ವೇದಮಂತ್ರದೊಂದಿಗೆ ಅಭಿಷೇಕ ಮಾಡಲಾಯಿತು. ಕಲ್ಯಾಣಿ ತಾಯಿಗೆ ಪೂಜೆ ನೆರವೇರಿಸಿ ಸ್ನಪ್ನಶೆಲ್ವರನ್ನು ಕಲ್ಯಾಣಿಗೆ ಕೊಂಡೊಯ್ದು ತೀರ್ಥಸ್ನಾನ ನೆರವೇರಿಸಲಾಯಿತು. ಕಲ್ಯಾಣಿಯ ನಾಲ್ಕೂ ಕಡೆ ಸೇರಿದ್ದ ಸಹಸ್ರಾರು ಭಕ್ತರು ಪವಿತ್ರ ಸ್ನಾನ ಮಾಡಿದರು. ಬೆಳಗ್ಗೆ ತಂಗಳನ್ನದ ಮಂಟಪದಲ್ಲಿ ಚೆಲುವನಾರಾಯಣಸ್ವಾಮಿಯ ಉತ್ಸವ ನಡೆದ ನಂತರ ದೇವಾಲಯದ ಅಮ್ಮನವರ ಸನ್ನಿಧಿಯಲ್ಲಿ ಸಂಧಾನ ಸೇವೆ ನೆರವೇರಿತು. ಮಧ್ಯಾಹ್ನ 1.30 ರ ವೇಳೆಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ತಲುಪಿದ ನಂತರ ತೀರ್ಥ ಸ್ನಾನದ ಪ್ರಕ್ರಿಯೆ ಆರಂಭವಾಗಿ 3ಗಂಟೆ ವೇಳೆಗೆ ಧಾರ್ಮಿಕ ಕೈಂಕರ್ಯ ಮುಕ್ತಾಯವಾದವು.
ಮೇಲುಕೋಟೆ ಪೊಲೀಸರು ಸಾಂಪ್ರದಾಯಿಕ ಪದ್ಧತಿಯಂತೆ ತೀರ್ಥಸ್ನಾನ ಆರಂಭವಾಗುವವರೆಗೆ ಯಾರೂ ಸಹ ಕಲ್ಯಾಣಿಯ ಪವಿತ್ರ ತೀರ್ಥ ಸ್ಪರ್ಶಿಸದಂತೆ ಕಟ್ಟೆಚ್ಚರ ವಹಿಸಿದ್ದರು. ಇನ್‌ಸ್ಪೆಕ್ಟರ್ ಶರತ್ ಮತ್ತು ಸಬ್‌ಇನ್‌ಸ್ಪೆಕ್ಟರ್ ಪ್ರಮೊದ್ ನೇತೃತ್ವದ ಮೇಲುಕೋಟೆ ಪೊಲೀಸರ ತಂಡ ಭದ್ರತೆ ಒದಗಿಸಿತ್ತು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪರಮೇಶ್‌ಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸೇರಿದಂತೆ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಿದ್ದರು.
ರಾಜಮುಡಿ ಕಿರೀಟಧಾರಣೆ ಸಂಪನ್ನ: ಸಂಜೆ ಪರಕಾಲಮಠದಲ್ಲಿ ಪಟ್ಟಾಭಿಷೇಕ ಮಹೋತ್ಸವದ ಕೈಂಕರ್ಯ ನೆರವೇರಿದವು. ವೈರಮುಡಿ ಉತ್ಸವದ ಅಂಗವಾಗಿ ಮಾರ್ಚ್ 28ರಂದು ರಾತ್ರಿಯಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿದ್ದ ರಾಜಮುಡಿ ಕಿರೀಟ ಬ್ರಹ್ಮೋತ್ಸವದ ಕೊನೆಯ ಉತ್ಸವವಾದ ಗುರುವಾರದ ರಾತ್ರಿಯ ಪಟ್ಟಾಭಿಷೇಕ ಉತ್ಸವದಲ್ಲಿ ಕೊನೆಯ ಭಾರಿಗೆ ಅಲಂಕರಿಸಲಾಗಿತ್ತು. ರಾಜಮುಡಿ ಅಲಂಕಾರ ಮುಕ್ತಾಯವಾಗುತ್ತಿದ್ದಂತೆ ಸ್ವಾಮಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ವೈಭವದಿಂದ ನೆರವೇರಿತು.
ನಾರಾಯಣಪುರದಲ್ಲಿ ತೀರ್ಥೋದ್ಬವ ಪವಾಡ: ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯುತ್ತಿದ್ದ ವೇಳೆ ಪ್ರತಿ ವರ್ಷದಂತೆ ಗುರುವಾರದ ತೀರ್ಥಸ್ನಾನದ ವೇಳೆಯೂ ಕಾಣಿಸಿಕೊಂಡ ಮಹಾವಿಷ್ಣುವಿನ ವಾಹನ ಸ್ವರೂಪಿ ಗರುಡ ಸ್ನಪ್ನ ಶೆಲ್ವರಿಗೆ ಅಭಿಷೇಕವಾಗುತ್ತಿದ್ದ ವೇಳೆ ಕಲ್ಯಾಣಿಯಲ್ಲಿ ಪ್ರದಕ್ಷಿಣೆ ಹಾಕಿದಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಬೆಳಗ್ಗೆಯಿಂದಲೂ ಕಲ್ಯಾಣಿಯತ್ತ ಸುಳಿಯದ ಗರುಡ ತೀರ್ಥ ಸ್ನಾನದ ವೇಳೆ ಆಗಮಿಸಿ ತೀರ್ಥ ಸ್ಪರ್ಶಿಸಿ ಸಾಗಿ ಹೋದಾಗ ಭಕ್ತರ ಹರ್ಷೋದ್ಘಾರಕ್ಕೆ ಕಾರಣವಾಯಿತು. ಮತ್ತೊಂದೆಡೆ ಮೇಲುಕೋಟೆಯಿಂದ 12 ಕಿ.ಮೀ.ದೂರಲ್ಲಿರುವ ನಾರಾಯಣಪುರ ಗ್ರಾಮದ ಬರಡು ಹೊಲದಲ್ಲಿ ಚೆಲುವನಾರಾಯಣಸ್ವಾಮಿಗೆ ತೀರ್ಥಸ್ನಾನವಾಗುತ್ತಿದ್ದಂತೆ ಅಲ್ಲಿನ ಬರಡು ಹೊಲದಲ್ಲಿ ತೆಗೆದ ಒಂದೆರಡು ಅಡಿ ಆಳದ ಗುಂಡಿಯಲ್ಲಿ ತೀರ್ಥ ಶೇಖರವಾಗುವುದರೊಂದಿಗೆ ಪ್ರತಿ ವರ್ಷದ ಪವಾಡ ಈ ವರ್ಷವೂ ಮುಂದುವರಿದು ಭಕ್ತರನ್ನು ಭಕ್ತಿವಶ ಮಾಡಿತು. ತೀರ್ಥೋದ್ಬವದ ವೇಳೆ ಹೊಲದ ಮಾಲೀಕ ಶ್ರೀಧರ್ ಮತ್ತು ಕುಮಾರ್ ಪೂಜೆ ನೆರವೇರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net