ವಿದ್ಯೆಗೆ ಮಹತ್ವ ನೀಡಿದ ಬಸವಣ್ಣ: ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿಕೆ

ಮಂಡ್ಯ ನಗರದ ಡಾ.ಶಿವಕುಮಾರಸ್ವಾಮಿ ಉದ್ಯಾನದಲ್ಲಿ ಅನುಭವ ಮಂಟಪ ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ವಿಚಾರ ಚಿಂತನ ಆಯೋಜಿಸಲಾಗಿತ್ತು.
ಮಂಡ್ಯ ನಗರದ ಡಾ.ಶಿವಕುಮಾರಸ್ವಾಮಿ ಉದ್ಯಾನದಲ್ಲಿ ಅನುಭವ ಮಂಟಪ ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ವಿಚಾರ ಚಿಂತನ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ನಗರದ ಡಾ.ಶಿವಕುಮಾರಸ್ವಾಮಿ ಉದ್ಯಾನದಲ್ಲಿ ವಿಚಾರ ಚಿಂತನ ಕಾರ್ಯಕ್ರಮ
  • ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಆಯೋಜನೆ
ಮಂಡ್ಯ: ವಿದ್ಯೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದ ಬಸವಣ್ಣ ಸಮಾನತೆಗಾಗಿ, ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಕುಮಾರಸ್ವಾಮಿ ಹೇಳಿದರು.
ಅನುಭವ ಮಂಟಪ ಸಾಮಾಜಿಕ-ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ನಗರದ ಡಾ.ಶಿವಕುಮಾರಸ್ವಾಮಿ ಉದ್ಯಾನದಲ್ಲಿ ಆಯೋಜಿಸಿದ್ದ ಬಸವಪಥ ಸಮಾನತೆ ರಥ ವಿಚಾರ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯತೆ, ಜಾತಿಯ ಮೇಲು-ಕೀಳು ತಾಂಡವವಾಡುತ್ತಿದ್ದ ಕಾಲಘಟ್ಟದಲ್ಲಿ ಬಸವಣ್ಣರ ಕಾಯಕ ಸಮಾನತೆ ಮತ್ತು ಅನುಭವ ಮಂಟಪದ ಅನುಷ್ಠಾನ ಕ್ರಾಂತಿಕಾರಿ ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಉಳ್ಳವರು, ಬಲಾಢ್ಯರ ಆಶ್ರಯತಾಣವಾಗಿರುವ ಮೇಲ್ಮನೆ ಬಸವಣ್ಣನವರ ಆಶಯದಂತೆ ಅನುಭವ ಮಂಟಪ ಆಗಬೇಕು. ಎಲ್ಲ ಜನ ವರ್ಗಕ್ಕೆ ಪ್ರಾತಿನಿಧ್ಯ ಸಿಗಬೇಕಾದರೆ ವಿಧಾನ ಪರಿಷತ್, ರಾಜ್ಯಸಭೆಯಲ್ಲಿ ಮೀಸಲಾತಿ ಜಾರಿಯಾಗಬೇಕು ಎಂದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಸಮ ಸಮಾಜದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಯುಗಪುರುಷ ಬಸವಣ್ಣ. ಸಂಸ್ಕೃತ ಭಾಷೆ ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಸರಳವಾಗಿ ಕನ್ನಡದಲ್ಲಿ ವಚನಗಳನ್ನು ರಚಿಸಿ ಜನಸಾಮಾನ್ಯರನ್ನು ಜಾಗೃತಿಗೊಳಿಸಿದ ವಿಶ್ವಜ್ಯೋತಿ ಎಂದು ಬಣ್ಣಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯಕುಮಾರ್ ಮಾತನಾಡಿ, ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದೇ ನಿಜವಾದ ಧರ್ಮ. ಆದರೆ, ಇಂದಿನ ಈ ಆಧುನಿಕ ಕಾಲಮಾನದಲ್ಲಿ ಜಾತಿ, ಧರ್ಮ, ಅಧಿಕಾರದ ಹಿನ್ನೆಲೆಯಲ್ಲಿ ಮನುಷ್ಯನ ಗೌರವವನ್ನು ನಿರ್ಧರಿಸಲಾಗುತ್ತದೆ. ಪ್ರಜ್ಞಾವಂತರು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವುದು ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಲಿಂಗಾಯತ ಸಮುದಾಯದ ಮುಖಂಡರಾದ ಮಂಡಿಬೆಟ್ಟಹಳ್ಳಿ ಮಂಜುನಾಥ್, ಸೋಮಶೇಖರ್, ನಗರಸಭೆ ಮಾಜಿ ಸದಸ್ಯ ಅಮ್ಜದ್‌ಪಾಷ, ರೂಪಾ ಕುಮಾರಸ್ವಾಮಿ ಮಾತನಾಡಿದರು. ಮುಖಂಡರಾದ ಸಂತೆಕಸಲಗೆರೆ ಬಸವರಾಜು, ಶೇಖರ್ ಹನಿಯಂಬಾಡಿ, ಎಂ.ವಿ.ಮಂಚಶೆಟ್ಟಿ, ಮಹಂತಪ್ಪ, ಮಹೇಶ್ ಕೆರಗೋಡು, ಮಲ್ಲಿಕಾರ್ಜುನಯ್ಯ, ಕೃಷ್ಣರಾಜೇ ಅರಸ್, ಬಸವರಾಜು, ಶಶಿಧರ್, ಜಯರಾಂ, ಸಿ.ಸಿದ್ದಶೆಟ್ಟಿ, ಪ್ರದೀಪ್, ಎ.ಎಲ್.ಬಸವೇಗೌಡ ಇತರರಿದ್ದರು.
ವಿವಿಧ ಸಮುದಾಯ ಮತ್ತು ಸಂಘಟನೆಯ ಮುಖಂಡರು ಅನುಭವ ಮಂಟಪದ ಮಾದರಿಯಲ್ಲಿ ಒಗ್ಗೂಡಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಸವಣ್ಣ ಹೊಂದಿದ್ದ ಸಮಭಾವ-ದೂರದೃಷ್ಠಿ ಪ್ರಸ್ತುತತೆ ಕುರಿತು ವಿಚಾರ ಲಹರಿ ತೇಲಿ ಬಂದಿತ್ತು. ಬಸವ ವಚನಗಳು ರಂಜನೆಯ ಜತೆಗೆ ಬೆಳಕಾದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net