ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ, ಉಪಾಧ್ಯಕ್ಷ ಎಚ್.ಸಿ.ಮಹೇಶ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಅನಿತಾ, ನಾಗಭೂಷಣ್, ನಾಗರಾಜು ಇದ್ದರು.
ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ತೊಟ್ಟಿಮನೆ ಚನ್ನಪ್ಪ ಮತ್ತು ಉಪಾಧ್ಯಕ್ಷರಾಗಿ ಎಚ್.ಸಿ.ಮಹೇಶ್ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದು ಐದು ತಿಂಗಳು ಕಳೆದಿತ್ತು. ಆದರೆ ಪದಾಧಿಕಾರಿಗಳ ಆಯ್ಕೆಗಾಗಿ ಮೂರು ಬಾರಿ ದಿನಾಂಕ ನಿಗದಿಯಾದರೂ ಸದಸ್ಯರ ಸಂಖ್ಯಾಬಲ ಕೊರತೆಯಿಂದ ಚುನಾವಣೆ ಮುಂದೂಡಲಾಗಿತ್ತು. ಜತೆಗೆ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು.
ಚುನಾಯಿತರಾಗಿದ್ದ ನಿರ್ದೇಶಕರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ವಿಚಾರದಲ್ಲಿ ಎರಡು ಗುಂಪುಗಳಾಗಿ ವಿಭಜನೆ ಉಂಟಾಗಿತ್ತು. ಇದರಿಂದಾಗಿ ಸಂಘದ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಮುಖಂಡರು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಎರಡೂ ಗುಂಪುಗಳ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದರು. ಗೊಂದಲ ನಿವಾರಿಸಿ ಒಮ್ಮತದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಮಂಗಳವಾರ ಸಹಕಾರ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ವಿಶೇಷ ಸಭೆಯಲ್ಲಿ ತೊಟ್ಟಿಮನೆ ಚನ್ನಪ್ಪ ಅವರನ್ನು ಅಧ್ಯಕ್ಷರಾಗಿ ಮತ್ತು ಎಚ್.ಸಿ.ಮಹೇಶ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ ಮಾತನಾಡಿ, ಸದಸ್ಯರ ಸಹಕಾರದಿಂದ ಸಂಘವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲಾಗುವುದು. ರೈತರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ ನೀಡುವುದು ನಮ್ಮ ಆದ್ಯತೆ ಎಂದು ತಿಳಿಸಿದರು.
ಸಹಕಾರ ಇಲಾಖೆಯ ಸಹಾಯಕ ನಿಬಂಧಕಿ ಕೆ.ಅನಿತಾ ಚುನಾವಾಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಆಡಳಿತಾಧಿಕಾರಿ ಎಚ್.ಆರ್.ನಾಗಭೂಷಣ್, ಕಾರ್ಯದರ್ಶಿ ನಾಗರಾಜು, ಇತರರು ಇದ್ದರು.