ಕಾವೇರಿ ನೀರು ಕುಡಿಯುವವರು ಕನ್ನಡ ಕಲಿಯಲಿ

ತೊರೆಕಾಡನಹಳ್ಳಿ ಗ್ರಾಮದಲ್ಲಿ ನಡೆದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜಶೇಖರ್ ಮಾತನಾಡುತ್ತಿರುವುದು.
ತೊರೆಕಾಡನಹಳ್ಳಿ ಗ್ರಾಮದಲ್ಲಿ ನಡೆದ ನುಡಿ ಹಬ್ಬ ಕಾರ್ಯಕ್ರಮದಲ್ಲಿ ರಾಜಶೇಖರ್ ಮಾತನಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮುಖ್ಯ ಇಂಜಿನಿಯರ್ ಎ.ರಾಜಶೇಖರ್ ಅಭಿಪ್ರಾಯ
ಹಲಗೂರು: ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಬೆಂಗಳೂರಿಗೆ ನೀರು ಸರಬರಾಜಾಗುತ್ತಿದ್ದು ಅಲ್ಲಿ ವಾಸಿಸುವ 1.40 ಕೋಟಿ ಜನ ಕಾವೇರಿ ನೀರನ್ನು ನಾವು ಒದಗಿಸುತ್ತಿದ್ದೇವೆ. ಅವರೆಲ್ಲ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಎಷ್ಟು ಚೆಂದ ಎಂದು ಕಾವೇರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮುಖ್ಯ ಇಂಜಿನಿಯರ್ ಎ.ರಾಜಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತೊರೆ ಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೌಕರರ ಸಂಘ ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸ್ಥಳೀಯ ಸಮಿತಿ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ 2026ನೇ ನುಡಿ ಹಬ್ಬ (ಕಾವೇರಿ ಮಡಿಲಿನಲ್ಲಿ ನಿತ್ಯೋತ್ಸವ) ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಕನ್ನಡ ಭಾಷೆ ಕೇವಲ ಕಾದಂಬರಿಗಳಲ್ಲಿ ಮತ್ತು ಪುಸ್ತಕಗಳಲ್ಲಿದ್ದರೆ ಸಾಲದು. ಅದನ್ನು ಎಲ್ಲರೂ ಸಾಮಾನ್ಯ ಭಾಷೆಯಾಗಿ ಮಾತನಾಡಿದರೆ ಚೆನ್ನಾಗಿ ಅದು ಪಸರಿಸುತ್ತದೆ ಎಂದು ತಿಳಿಸಿದರು.  
ಜಲ ಮಂಡಳಿಯ ನೌಕರರ ಸಂಘದ ಅಧ್ಯಕ್ಷ ಎ.ಗೋವಿಂದರಾಜ್ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ, ಅದನ್ನು ಪೂರೈಸುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ. ನಾನು ಎಇಇ ಮತ್ತು ಎಇ ಆಗಿ ಕೆಲಸ ಮಾಡಿದ್ದೆ, ಅದರಿಂದ ನನಗೆ ಹೊರಗೆ ಕೆಲಸ ಮಾಡುವ ನೌಕರರ ಸಿಬ್ಬಂದಿ ಕಷ್ಟ ಏನೆಂದು ಗೊತ್ತು. ಜಲಮಂಡಳಿಯಲ್ಲಿ ವಸತಿಗೃಹಗಳು ತುಂಬ ಹಳೆಯದಾಗಿವೆ, ಬೆಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುವ ನೌಕರರು ಇಲ್ಲಿ ಈ ಹಳೆಯ ವಸತಿ ಗೃಹಗಳಲ್ಲಿ ವಾಸಿಸುತ್ತಿದ್ದಾರೆ. ನಾನು ಚೀಫ್ ಇಂಜಿನಿಯರ್ ಆಗಿ ಬಂದಾಗ ಹೊಸ ವಸತಿಗೃಹಗಳನ್ನು ಕಟ್ಟಿಸಬೇಕೆಂಬ ಆಸೆ ಇತ್ತು. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಐದನೇ ಹಂತದ ಕಾಮಗಾರಿಗೆ ಕೆಲವು ಹಳೆಯ ವಸತಿ ಗೃಹಗಳನ್ನು ಒಡೆಯಲಾಯಿತು. ಮುಂದೆ ಇರುವ ಹಳೇ ವಸತಿಗೃಹಗಳನ್ನು ಒಡೆದು ಆ ಜಾಗದಲ್ಲಿ ಒಂದು ಯೂನಿಟ್‌ಗೆ 12 ಮನೆ ಬರುವ ಹಾಗೆ ವಸತಿಗೃಹಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
 ಬೆಂಗಳೂರಿನಲ್ಲಿ ಒಂದು ಕೋಟಿ ನಲ್ವತ್ತು ಲಕ್ಷ ಜನರು ಕಾವೇರಿ ನೀರನ್ನು ಕುಡಿಯುತ್ತಿದ್ದಾರೆ ಎಂಬ ಮಾಹಿತಿ ಇದೆ. ಅವರೆಲ್ಲ ಕನ್ನಡ ಕಲಿತು ಮಾತನಾಡಿದರೆ ಚೆನ್ನಾಗಿರುತ್ತದೆ. ಕಾವೇರಿ ನೀರು ಕುಡಿಯುವವರೆಲ್ಲ ಕನ್ನಡ ಭಾಷೆ ಮಾತನಾಡಬೇಕು ಎಂಬುದು ನನ್ನ ಇಚ್ಛೆ ಎಂದರು.
ನಂತರ ಸೂಪರ್ ಸ್ಟಾರ್ ಮೆಲೋಡೀಸ್ ಮೈಸೂರ್‌ರಿಂದ ರಸಮಂಜರಿ ಕಾರ್ಯಕ್ರಮವನ್ನು ನಡೆಸಲಾಯಿತು. ಆಡಳಿತಾಧಿಕಾರಿ ಮದನ್ ಮೋಹನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಲೋಲಾಕ್ಷಿ,, ಪ್ರಧಾನ ಇಂಜಿನಿಯರ್ ದಲಾಯತ್, ಮುಖ್ಯ ಲೆಕ್ಕಾಧಿಕಾರಿ ಜೆ.ಎಸ್.ಸುಬ್ಬರಾಮಯ್ಯ, ಮುಖ್ಯ ಇಂಜಿನಿಯರ್ ಜಯಶಂಕರ್, ಅಪರ ಮುಖ್ಯ ಇಂಜಿನಿಯರ್ ರಾಘವೇಂದ್ರ, ಗೋವಿಂದರಾಜು, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೂಡಲ ಸಂಗಮ, ಗಿರಿಗೌಡ, ಪ.ಜಾ. ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಚೇತನ್, ಎಇಇ ನರೇಶ್, ಮೊಹಮ್ಮದ್ ಹನೀಫ್, ರವಿಚಂದ್ರ, ಚಂದ್ರಮೋಹನ್, ಮಹೇಂದ್ರರಾಜು, ವರದರಾಯಸ್ವಾಮಿ, ಕಾರ್ತಿಕ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net