ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆಯನ್ನು ಶಾಸಕ ಕೆ.ಎಂ.ಉದಯ್ ಬಿಡುಗಡೆಗೊಳಿಸಿದರು. ಸುನೀಲ್‌ಕುಮಾರ್, ಸಿ.ಅಪೂರ್ವಚಂದ್ರ, ಡಾ.ಕೃಷ್ಣ, ಪ್ರೊ.ಬೋರೇಗೌಡ, ರಮೇಶ್, ನಾಗರಾಜು, ಚಂದ್ರಶೇಖರ್, ಯತೀಶ್, ರವಿ ಇದ್ದರು.
ಮದ್ದೂರು: ಸೆ.17ರಂದು ತಾಲೂಕು ಕ್ರೀಡಾಂಗಣದಲ್ಲಿ 10 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನ ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಸ್ಪಷ್ಟಪಡಿಸಿದರು.
ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಇತ್ತೀಚೆಗೆ ಸಾಹಿತ್ಯ ಸಮ್ಮೇಳನ ನಡೆಸುವ ವಿಷಯದಲ್ಲಿ ಕೆಲವರು ಪ್ರತಿಷ್ಠೆಗಾಗಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿರುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳನ ನಡೆಸಲು ಯಾರ ಅಪ್ಪಣೆಯೂ ಬೇಕಿಲ್ಲ. ರಾಜಕೀಯ ಮಾಡಿಕೊಂಡು ಸಮಿತಿ ಮಾಡಿಕೊಳ್ಳದಿದ್ದರೆ ಕನ್ನಡ ಕಾರ್ಯಕ್ರಮವನ್ನು ಬೇರೆಯವರು ಮಾಡಬಾರದಾ ಎಂದು ಪ್ರಶ್ನಿಸಿದರು.
ಕನ್ನಡ ಕಾರ್ಯಕ್ರಮವನ್ನು ಯಾರು ಬೇಕಾದರೂ ಮಾಡುವ ಅವಕಾಶ, ಅಧಿಕಾರ ಇದೆ. ಕಸಾಪ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಸಮಿತಿಗಳು ರಚನೆಯಾಗಿಲ್ಲ ಎಂದು ನುಡಿ ಹಬ್ಬ ಮಾಡದಿದ್ದರೆ ನಮ್ಮ ಸಂಸ್ಕೃತಿ ಉಳಿಯುವುದು ಹೇಗೆ? ಸಮ್ಮೇಳನ ಅದ್ದೂರಿಯಾಗಿ ನಡೆಯಲಿದೆ. ಇದಕ್ಕೆ ಕನ್ನಡ ಸಾಹಿತ್ಯಾಸಕ್ತರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಣಸಾಲೆ ಸುನೀಲ್‌ಕುಮಾರ್, ಉಪಾಧ್ಯಕ್ಷ ಶಿವನಂಜಯ್ಯ, ಮಾಜಿ ಅಧ್ಯಕ್ಷ ಸಿ.ಅಪೂರ್ವಚಂದ್ರ, ಡಾ.ಕೃಷ್ಣ, ಪ್ರೊ.ಬೋರೇಗೌಡ, ಪುರಸಭೆ ಮಾಜಿ ಅಧ್ಯಕ್ಷ ರಮೇಶ್, ನಾಗರಾಜು, ಚಂದ್ರಶೇಖರ್, ಕೆ.ಎಂ.ರವಿ, ಯತೀಶ್ ಹಾಜರಿದ್ದರು.
14ರಿಂದ ಗಣೇಶೋತ್ಸವ
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.14 ರಿಂದ 20ರವರೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
14 ರಂದು ಸಂಜೆ 4 ಗಂಟೆಗೆ ಶ್ರೀ ಗಣೇಶನ ಪ್ರತಿಷ್ಠಾಪಿಸಲಾಗುವುದು. ನಿತ್ಯ ಸಂಜೆ ಪೂಜೆ, ಪ್ರಸಾದ ವಿತರಣೆ ಮಾಡಲಾಗುವುದು. 15 ರಂದು ಸಂಜೆ 4 ಗಂಟೆಗೆ ‘ರತ್ನ ಮಾಂಗಲ್ಯ’ ಸಾಮಾಜಿಕ ನಾಟಕ ಪ್ರದರ್ಶನವಿದೆ. 16ರಂದು ಬೆಳಗ್ಗೆ 11ಗಂಟೆಗೆ ಗರ್ಭಿಣಿಯರಿಗೆ ಬಾಗಿನ ಸಮರ್ಪಣೆ, ಸಂಜೆ 6.30 ರಿಂದ ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
17 ರಂದು ಸಂಜೆ 7.30 ಗಂಟೆಗೆ ಮಂಡ್ಯದ ಕರ್ನಾಟಕ ಸಂಘ, ಶ್ರೀ ಆದಿಚುಂಚನಗಿರಿ ಮೂಡಲ ಪಾಳ್ಯ ಯಕ್ಷಗಾನ ತಂಡದಿಂದ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಿದೆ ಎಂದು ವಿವರಿಸಿದರು.
18ರಂದು ಸಂಜೆ 6.30 ಗಂಟೆಗೆ ವಾಗ್ಮಿ ಡಾ.ಕೃಷ್ಣೇಗೌಡರ ತಂಡದಿಂದ ನಗೆಹಬ್ಬ, 19ರಂದು ಸಂಜೆ 6.30 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್, ನಟರಾದ ಗೋಲ್ಡರ್ ಸ್ಟಾರ್ ಗಣೇಶ್, ನೆನಪಿರಲಿ ಪ್ರೇಮ್, ತರುಣ್ ಸುಧೀರ್, ಸೋನಾಲ್ ತರುಣ್ ಸಾರಥ್ಯದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
20 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಟಿಬಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ಜನಪದ ತಂಡಗಳೊಂದಿಗೆ ಸಾಮೂಹಿಕ ಗಣೇಶನ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರ ಸೇರಿದಂತೆ ತಾಲೂಕಿನಾದ್ಯಂತ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ತಂದು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದು ಎಂದರು.