ಸಿರಿಗೆರೆ ಕೆರೆಗೆ ಇಲ್ಲ ತಡೆಗೋಡೆ

ಕಿಕ್ಕೇರಿ ಅಮಾನಿಕೆರೆಯ ಏರಿ ತೀವ್ರ ತಿರುವಿನಲ್ಲಿ ಸುರಕ್ಷಿತ ತಡೆಗೋಡೆ ಇಲ್ಲದಿರುವುದು.
ಕಿಕ್ಕೇರಿ ಅಮಾನಿಕೆರೆಯ ಏರಿ ತೀವ್ರ ತಿರುವಿನಲ್ಲಿ ಸುರಕ್ಷಿತ ತಡೆಗೋಡೆ ಇಲ್ಲದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಿಕ್ಕೇರಿ ರೈತರಲ್ಲಿ ಕಾಡುತ್ತಿದೆ ಪ್ರಾಣಭಯ
  • ಹತ್ತಾರು ಹಳ್ಳಿಗಳ ಬೆಸೆಯುವ ರಹದಾರಿ ಏರಿ
ಕಿಕ್ಕೇರಿ: ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ತವರಿನ ಸಿರಿಗೆರೆ(ಅಮಾನಿಕೆರೆ) ಕೆರೆ ಬಲು ವಿಸ್ತಾರವಾಗಿದ್ದು, ಕೆರೆಯ ಏರಿ ಹತ್ತಾರು ಹಳ್ಳಿಗಳ ಬೆಸೆಯುವ ರಹದಾರಿ. ಆದರೆ ತಡೆಗೋಡೆ ಇಲ್ಲದ ಪರಿಣಾಮ ಪ್ರಾಣಭಯದಲ್ಲೇ ಸಂಚರಿಸುವಂತಾಗಿದೆ.
ಸ.ನಂ. 219ರಲ್ಲಿ 222.22 ಎಕರೆ ಅಮಾನಿಕೆರೆ ಹಾಗೂ ಸ.ನಂ. 29ರಲ್ಲಿ 37.7ಎಕರೆ ವಡಕೆಕಟ್ಟೆ ಕೆರೆ ಇದೆ. ಎರಡು ಕೆರೆ ಸೇರಿ ಜೋಡಿ ಕೆರೆಯಾಗಿ 257.09ಎಕರೆ ವಿಸ್ತಾರ ಹೊಂದಿದೆ. ಕೆರೆಯ ಪೂರ್ವ ಆಗ್ನೇಯದಲ್ಲಿನ ವಡಕಕಟ್ಟೆಗೆ ಸೊಳ್ಳೇಪುರ, ಶಂಕರಾಪುರ ಹೊಂದಿಕೊಂಡ ಗ್ರಾಮವಾಗಿದೆ. ಅಮಾನಿಕೆರೆ ಕಿಕ್ಕೇರಿ, ಮಾದಿಹಳ್ಳಿ, ಬೂವನಹಳ್ಳಿ, ಮಾದಿಹಳ್ಳಿ, ಸೊಳ್ಳೇಪುರ ಗ್ರಾಮಕ್ಕೆ ಹೊಂದಿಕೊಂಡಂತಿದೆ.
ಕೆರೆ ತುಂಬಿದರೆ ಬಲುದೊಡ್ಡ ಸರೋವರದಂತೆ ಕಾಣಲಿದೆ. ತಾಲೂಕಿನಲ್ಲಿಯೇ ಬಲುದೊಡ್ಡ ಕೆರೆ ಎಂಬ ಕೀರ್ತಿ ಇದೆ. ಕೆರೆ ತುಂಬಿದರೆ ಸುತ್ತಮುತ್ತಲ ನೂರಾರು ಎಕರೆಯಲ್ಲಿನ ಕೃಷಿಕರ ಭೂಮಿ ಹಸಿರಾಗಿ ನಳನಳಿಸುತ್ತದೆ. ರೈತರು ನೆಮ್ಮದಿಯಿಂದ ಬೆಳೆ ಬೆಳೆ ಅನುಕೂಲವಾಗಲಿದೆ.
ಕಿರಿದಾದ ಕೆರೆಗೆ ಏರಿ ನಿರ್ಮಿಸಿದ ಕಾರಣದಿಂದ ಕೆರೆ ಬದಿಯ ಗ್ರಾಮ ಕಿಕ್ಕೇರಿ ಆಗಿದೆ ಎಂದು ಹಿರಿಯರು ಹೇಳುವುದುಂಟು. ಆದರೆ ಈ ಕೆರೆ ಏರಿ ಬಲು ಉದ್ದವಿದ್ದು, ಈ ಏರಿಯೇ ಹಲವು ಗ್ರಾಮಗಳಿಗೆ ಸಂಪರ್ಕ ದಾರಿ ಕೂಡ ಆಗಿದೆ. ಸುಮಾರು 2 ಕಿ.ಮೀ. ಕೆರೆಗೆ ಏರಿ ಇದೆ.
ಗುಂಡಿ ಬಿದ್ದ ಏರಿ:
ಈ ಏರಿ ಮೇಲೆ ಬಹುತೇಕ ರೈತರು ನಿತ್ಯ ಎತ್ತಿನ ಬಂಡಿ, ಟ್ರಾೃಕ್ಟರ್‌ನಂತಹ ವಾಹನಗಳಿಂದ ತಮ್ಮ ಜಮೀನುಗಳಿಗೆ ತೆರಳಬೇಕಿದೆ. ಉಳುಮೆಗಾಗಿ ನೇಗಿಲು, ಬಿತ್ತಲು ಬೀಜ, ಗೊಬ್ಬರ, ಜಾನುವಾರುಗಳಿಗೆ ಮೇವು, ಬೆಳೆದ ಫಸಲು ಈ ಏರಿ ಮೇಲೆ ಸಾಗಿಸಬೇಕಿದೆ. ಸೊಳ್ಳೇಪುರ, ಡಿಂಕಾ, ಶಂಕರಾಪುರ, ಕುಂದೂರು, ಕಳ್ಳನಕೆರೆಯಂತಹ ಹಲವು ಗ್ರಾಮಗಳಿಂದ ಕಿಕ್ಕೇರಿ ಹೋಬಳಿ ಕೇಂದ್ರಕ್ಕೆ ಬರಲು ಬಲು ಹತ್ತಿರದ ಮಾರ್ಗ ಕೂಡ ಈ ಏರಿ ಆಗಿದೆ.
ವಾಯುವಿಹಾರಗಳಿಗೆ ಕುತ್ತು: ನಿತ್ಯ ನೂರಾರು ಮಕ್ಕಳು ಓದು, ಬರಹ ಕಲಿಯಲು ಸಮೀಪದ ಹಳ್ಳಿಗಳಿಂದ ಕಾಲ್ನಡಿಗೆ, ಬೈಸಿಕಲ್‌ಗಳಲ್ಲಿ ಈ ಏರಿಯ ಮೇಲೆ ಓಡಾಡುವುದುಂಟು. ಕೂಲಿ ಕಾರ್ಮಿಕರು ನಿತ್ಯ ಪ್ರಯಾಣದ ದಾರಿ ಕೂಡ ಇದಾಗಿದೆ. ಮುಂಜಾನೆ, ಮುಸ್ಸಂಜೆ ವಾಯುವಿಹಾರಿಗಳು ಈ ಏರಿಯ ಮೇಲೆ ವಾಕಿಂಗ್ ಮಾಡುವುದುಂಟು. ಮುಂಜಾನೆ, ಮುಸ್ಸಂಜೆ ಈ ಏರಿಯಲ್ಲಿ ಜನಸಂದಣಿ ಅಧಿಕವಾಗಿರುವುದರಿಂದ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ. ಕೆರೆ ಏರಿ ಎತ್ತರವಾಗಿದ್ದು, ಏರಿಗೆ ಕಾಟಾಚಾರಕ್ಕೆ ಎನ್ನುವಂತೆ ಒಂದು ಅಡಿ ಎತ್ತರದ ಕಲ್ಲಿನ ತಡೆಗೋಡೆ ಬೆರಳೆಣಿಕೆಯಷ್ಟಿವೆ. ಅಪ್ಪಿತಪ್ಪಿ ಎದುರುಗಡೆಯಿಂದ ವಾಹನಗಳು ಬರುವುದನ್ನು ಮರೆತರೆ ಕೆರೆಗೆ ಬೀಳಬೇಕಿದೆ. ಇಲ್ಲವಾದರೆ ಏರಿ ಬದಿಯ ಹಳ್ಳದಲ್ಲಿರುವ ಜಮೀನುಗಳಿಗೆ ಬಿದ್ದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬೇಕಿದೆ.
ಹಲವು ವೇಳೆ ಸುತ್ತಮುತ್ತಲ ಗ್ರಾಮಗಳಲ್ಲಿ ನಡೆಯುವ ಹಬ್ಬ ಹರಿದಿನಗಳಿಗೆ ರಾತ್ರಿ ವೇಳೆ ಈ ಏರಿ ಮೇಲೆ ಸಾಗುವಾಗ ನಾಗರಿಕರು ತಡೆಗೋಡೆ ಇಲ್ಲದೆ ಏರಿಯಿಂದ ಬಿದ್ದು ಗಾಯಾಳುವಾಗಿರುವುದುಂಟು. ಹಲವರು ಕೆರೆಗೆ ಬಿದ್ದು ಈಜಿ ಪಾರಾಗಿರುವ ಉದಾಹರಣೆ ಇದೆ. ಎದುರು ಬದುರು ವಾಹನಗಳು ಬರುವಾಗ ದಾರಿ ಬಿಡಲು ಹೋಗಿ ಏರಿಯಿಂದ ಕೆಳಗೆ ಬಿದ್ದು ಕಲ್ಲುಮುಳ್ಳಿನಿಂದ ಪರಿಚಿಸಿಕೊಂಡವರಿಗೆ ಲೆಕ್ಕವೇ ಇಲ್ಲ. ಏರಿ ರಸ್ತೆಯಲ್ಲಿನ ಗುಂಡಿ ತಪ್ಪಿಸಿಕೊಳ್ಳಲು ತಡೆಗೋಡೆ ಇಲ್ಲದೆ ವಾಹನಗಳು ಏರಿಯಿಂದ ಕೆಳಗಡೆ ಬಿದ್ದು ಅವಘಡ ಸಂಭವಿಸಿವೆ. ಜತೆಗೆ ಏರಿ ಇಕ್ಕೆಲಗಳಲ್ಲಿನ ಗಿಡಗಂಟಿ ತೆರವು ಮಾಡದೆ ಏರಿಯ ರಸ್ತೆಯನ್ನೇ ಬಹುತೇಕ ಆವರಿಸಿಕೊಂಡಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net