ಕಿರೀಟದ ಗಂಟು ಹೊತ್ತು ಸಾಗಿದ ಶಾಸಕ

ಮಂಡ್ಯ ಜಿಲ್ಲಾ ಖಜಾನೆಯಿಂದ ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ರವಾನೆಯಾಗುತ್ತಿದ್ದ ಚೆಲುವನಾರಾಯಣಸ್ವಾಮಿ ವೈರಮುಡಿ ಕಿರೀಟವನ್ನು ತಾಲೂಕಿನ ಗಡಿ ಭಾಗದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಲೆ ಮೇಲೆ ಹೊತ್ತು ಸಾಗಿದರು.
ಮಂಡ್ಯ ಜಿಲ್ಲಾ ಖಜಾನೆಯಿಂದ ಪಾಂಡವಪುರ ಮಾರ್ಗವಾಗಿ ಮೇಲುಕೋಟೆಗೆ ರವಾನೆಯಾಗುತ್ತಿದ್ದ ಚೆಲುವನಾರಾಯಣಸ್ವಾಮಿ ವೈರಮುಡಿ ಕಿರೀಟವನ್ನು ತಾಲೂಕಿನ ಗಡಿ ಭಾಗದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಲೆ ಮೇಲೆ ಹೊತ್ತು ಸಾಗಿದರು.
Published on
ಪಾಂಡವಪುರ : ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವದ ವಜ್ರಖಚಿತ ವೈರಮುಡಿ ಮತ್ತು ರಾಜಮುಡಿ ಕಿರೀಟಗಳ ಗಂಟುಗಳನ್ನು ಶನಿವಾರ ತಾಲೂಕು ಆಡಳಿತ, ನಾಗರಿಕರು ಸಂಭ್ರಮದಿಂದ ಶನಿವಾರ ಸ್ವಾಗತಿಸಿ ಪೂಜೆ ಸಲ್ಲಿಸಿದರು.
ಮಂಡ್ಯ ಜಿಲ್ಲಾ ಖಜಾನೆಯಿಂದ ಮೈಸೂರಿನ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ವಾಹನದಲ್ಲಿ ಪೊಲೀಸ್ ಬಿಗಿಭದ್ರತೆಯೊಂದಿಗೆ ಶ್ರೀರಂಗಪಟ್ಟಣದ ಮೂಲಕ ಪಾಂಡವಪುರ ತಾಲೂಕಿನ ಗಡಿಭಾಗ ಪಿಎಸ್‌ಎಸ್‌ಕೆ ಬಳಿ ಬಂದ ವೈರಮುಡಿ ಮತ್ತು ರಾಜಮುಡಿಗಳನ್ನು ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಮತ್ತು ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ ಬರಮಾಡಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇದ್ದರು.
ಅಲ್ಲಿಂದ ಹೊರಟ ವೈರಮುಡಿ ಮತ್ತು ರಾಜಮುಡಿ ಕಿರೀಟಗಳು ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು ಗೇಟ್, ಹರಳಹಳ್ಳಿ ಗ್ರಾಮ, ಅರವಟ್ಟಿಗೆ ಮಂಟಪಕ್ಕೆ ತಲುಪಿತು. ಅಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಬಂದಾಗ ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಕೋಸಂಬರಿ, ಬೆಲ್ಲದ ಪಾನಕ, ಮಜ್ಜಿಗೆ ನೀಡಿದರು.
ಕಿರೀಟ ಹೊತ್ತು ಸಾಗಿದ ಶಾಸಕ: ಪಟ್ಟಣಕ್ಕೆ ಆಗಮಿಸಿದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳ ಗಂಟುಗಳನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೊತ್ತು ಸಾಗಿದರು. ಭಕ್ತರು ಗಂಟುಗಳನ್ನು ಮುಟ್ಟಿ ನಮಸ್ಕರಿಸಲು ಮುಗಿಬಿದ್ದರು. ಹಿರೇಮರಳಿ ಸರ್ಕಲ್, ಬನಘಟ್ಟ, ಕೆ.ಹೊಸೂರು ಸರ್ಕಲ್, ಇಂಗಲಗುಪ್ಪೆ ಛತ್ರ, ಮಹದೇಶ್ವರಪುರ, ನೀಲನಹಳ್ಳಿ ಗೇಟ್, ಬೆಳ್ಳಾಳೆ, ಮಾಣಿಕ್ಯನಹಳ್ಳಿ ಗೇಟ್, ಅಮೃತಿ, ನ್ಯಾಮನಹಳ್ಳಿ, ಜಕ್ಕನಹಳ್ಳಿ ಸರ್ಕಲ್, ಕದಲಗೆರೆ, ಲಕ್ಷ್ಮೀಪುರ ಗೇಟ್ ಮೂಲಕ ವೈರಮುಡಿ ಮತ್ತು ರಾಜಮುಡಿಗಳನ್ನು ಮೇಲುಕೋಟೆಗೆ ತರಲಾಯಿತು.
ರಸ್ತೆಯುದ್ದಕ್ಕೂ ಇದ್ದ ಅರವಟ್ಟಿಗೆ ಮಂಟಪಗಳಲ್ಲಿ ಮತ್ತು ಗ್ರಾಮಗಳಲ್ಲಿ ಭಕ್ತರು ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net