ವಿಜೃಂಭಣೆಯ ಭೂವರಾಹಸ್ವಾಮಿ ಜಯಂತ್ಯುತ್ಸವ

ಮೇಲುಕೋಟೆಯ ಕಲ್ಯಾಣಿ ತೀರದಲ್ಲಿರುವ ಭೂವರಾಹಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು
ಮೇಲುಕೋಟೆಯ ಕಲ್ಯಾಣಿ ತೀರದಲ್ಲಿರುವ ಭೂವರಾಹಸ್ವಾಮಿಗೆ ಅಭಿಷೇಕ ನೆರವೇರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು
Published on
ಮೇಲುಕೋಟೆ: ಮೇಲುಕೋಟೆಯ ಕಲ್ಯಾಣಿ ತೀರದಲ್ಲಿರುವ ಭೂವರಾಹಸ್ವಾಮಿಯ ಜಯಂತ್ಯುತ್ಸವ ಗುರುವಾರ ವೈಭವದಿಂದ ನೆರವೇರಿತು.
ಕಲ್ಯಾಣಿ ತೀರದಲ್ಲಿ ವಿರಾಜಮಾನವಾಗಿರುವ ಭೂದೇವಿ ಸಮೇತ ಭೂವರಾಹಸ್ವಾಮಿಗೆ ವೇದ ಹಾಗೂ ಮಂಗಳವಾದ್ಯಗಳೊಂದಿಗೆ ಹಾಲು, ಮೊಸರು, ಜೇನು, ಎಳನೀರು ಮುಂತಾದ ಮಂಗಳ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಅಭಿಷೇಕದ ನಂತರ ವರಾಹಸ್ವಾಮಿಗೆ ಪ್ರಿಯವಾದ ಹೂಗಳಿಂದ ತಯಾರಿಸಿದ ಭವ್ಯತೋಮಾಲೆಗಳಿಂದ ಅಲಂಕಾರ ಮಾಡಲಾಯಿತು. ಅಂತಿಮವಾಗಿ ದೇವಾಲಯದಲ್ಲಿ ಮಹಾಮಂಗಳಾರತಿ ಶಾತ್ತುಮೊರೈ ನಡೆದವು. ಕರ್ನಾಟಕದಲ್ಲಿರುವ ವರಾಹಸ್ವಾಮಿ ದೇವಾಲಯಗಳ ಪೈಕಿ ಮೇಲುಕೋಟೆಯಲ್ಲಿರುವ ವರಾಹಸ್ವಾಮಿಯೂ ಪ್ರಮುಖ ದೇವಾಲಯವಾಗಿದ್ದು, ಸಾಲಿಗ್ರಾಮ ಶಿಲೆಯಿಂದ ಪ್ರತಿಷ್ಠಾಪಿಸಲಾದ ಸುಮಾರು ಎಂಟು ಅಡಿಯ ಭೂವರಾಹಸ್ವಾಮಿ ಮೂರ್ತಿ ಆಕರ್ಷಕವಾಗಿದೆ. ಈ ವರಾಹಸ್ವಾಮಿ ಬೆವರಿನಿಂದಲೇ ಕಲ್ಯಾಣಿತೀರ್ಥ ಉಗಮವಾಗಿದೆ ಎಂಬ ನಂಬಿಕೆಯಿದೆ.
ವರಾಹ ಜಯಂತಿಯ ಅಂಗವಾಗಿ ಗುರುವಾರ ಸಂಜೆ ಚೆಲುವನಾರಾಯಣಸ್ವಾಮಿ ಉತ್ಸವ ಕಲ್ಯಾಣಿ ತೀರದಲ್ಲಿರುವ ವರಾಹ ಸನ್ನಿಧಿಯಲ್ಲಿ ದಿವ್ಯಪ್ರಬಂದಪಾರಾಯಂಗಳು ನೆರವೇರಿದವು. ಅರ್ಚಕ ಸ್ಥಾನಾಚಾರ್ಯ ಕೋವಿಲ್‌ನಂಬಿ ಸಂಪತ್ಕುಮಾರನ್ ಮತ್ತು ಸಹೋದರರು ವರಾಹ ಜಯಂತಿಯ ಕಾರ್ಯಕ್ರಮಗಳನ್ನು ನೆರವೇರಿಸಿದರು. ಕದಂಬ, ಮೊಸರನ್ನು ಹಾಗೂ ವಿಶೇಷವಾಗಿ ಕೊನ್ನಾರಿಗಡ್ಡೆಯಿಂದ ಮಾಡಿದ ಕೊಬ್ಬರಿ ಸಕ್ಕರೆ ನಿವೇದನ ಮಾಡಿ ಜಯಂತ್ಯುತ್ಸವದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರಿಗೆ ವಿನಿಯೋಗ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net