ಸಂಭ್ರಮದ ಸಿಡಿಬಂಡಿ ಉತ್ಸವಕ್ಕೆ ತೆರೆ

ಮಳವಳ್ಳಿ ಪಟ್ಟಣದ ವಿವಿಧ ಬಡಾವಣೆಯಲ್ಲಿ ನಡೆದ ಸಿಡಿ ಬಂಡಿಗೆ ಸಹಸ್ರಾರು ಸಂಖ್ಯೆಯ ಭಕ್ತರು ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.
ಮಳವಳ್ಳಿ ಪಟ್ಟಣದ ವಿವಿಧ ಬಡಾವಣೆಯಲ್ಲಿ ನಡೆದ ಸಿಡಿ ಬಂಡಿಗೆ ಸಹಸ್ರಾರು ಸಂಖ್ಯೆಯ ಭಕ್ತರು ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಎರಡು ದಿನಗಳ ಹಬ್ಬದಲ್ಲಿ ವಿವಿಧ ಪೂಜಾ ಕೈಂಕರ್ಯ
ಮಳವಳ್ಳಿ : ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ಮತ್ತು ಶನಿವಾರ ಐತಿಹಾಸಿಕ ಪಟ್ಟಲದಮ್ಮನ ಸಿಡಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪಟ್ಟಣದ ಸುಲ್ತಾನ್ ರಸ್ತೆ ಬದಿಯಲ್ಲಿರುವ ಪಟ್ಟಲದಮ್ಮ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಹೋಮ ಹವನ ಪೂಜಾ ಕೈಂಕರ್ಯಗಳು ಜರುಗಿದವು. ಗರ್ಭಗುಡಿಯಲ್ಲಿರುವ ಚಿಕ್ಕಮ್ಮ-ದೊಡ್ಡಮ್ಮ ತಾಯಿ ವಿಗ್ರಹಗಳಿಗೆ ವಿವಿಧ ಹೂವುಗಳಿಂದ ಅಲಂಕರಿಸಿದ್ದ ಅರ್ಚಕ ವೃಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು. ಬೆಳಗ್ಗಿನಿಂದಲೇ ಪಟ್ಟಣದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪಟ್ಟಲದಮ್ಮ ದೇವಿಯರಿಗೆ ಭಕ್ತಿ ಸಮರ್ಪಿಸಿದರು. ಹಬ್ಬದ ಪ್ರಯುಕ್ತ ಪಟ್ಟದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ಹೊರ ಊರುಗಳಿಂದ ಸಿಡಿ ವೀಕ್ಷಣೆ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ಪಟ್ಟಣದ ತುಂಬೆಲ್ಲ ಜನಜಂಗುಳಿಯಿಂದ ಕೂಡಿತ್ತು.
ಶುಕ್ರವಾರ ಮಧ್ಯಾಹ್ನದ ನಂತರ ಪಟ್ಟಲದಮ್ಮನ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆಯುವ ಕೊಂಡೋತ್ಸವಕ್ಕೆ ತಮ್ಮಡಹಳ್ಳಿಯಲ್ಲಿ ನಾಡಗೌಡರ ನಿಂಗೇಗೌಡರ ಕುಟುಂಬದವರು ಮುಂದಿನ ಏರುಗಳಿಗೆ ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಸೌದೆ ತರುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ನಂತರ ಪಟ್ಟಲದಮ್ಮನ ದೇವಸ್ಥಾನದ ಬಳಿಗೆ ಜೋಡಿ ರಾಸುಗಳ ಮೂಲಕ ತಂದಿದ್ದ ಸೌದೆಗಳನ್ನು ಒಂದೆಡೆ ಜೋಡಣೆ ಮಾಡಿ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಲಾಯಿತು.
ಸಿಡಿಬಂಡಿ ಹಾಗೂ ಘಟಗಳ ಮೆರವಣಿಗೆ ಚಾಲನೆ: 
ಹಬ್ಬದ ಪ್ರಮುಖ ಆಕರ್ಷಣೆಯಾದ ಸಿಡಿಬಂಡಿ ಮತ್ತು ಘಟಗಳ ಮೆರವಣಿಗೆಗೆ ರಾತ್ರಿ 10ಗಂಟೆಯ ವೇಳೆಗೆ ಪೂಜಾ ಕಾರ್ಯಗಳು ಪ್ರಾರಂಭವಾದವು. ಸಾಂಪ್ರದಾಯಿಕವಾಗಿ ಘಟಗಳ ಮೆರವಣಿಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡಿದರು. ಮೊದಲಿಗೆ ಪೇಟೆ ಒಕ್ಕಲಗೇರಿ ಮಹಿಳೆಯರಿಂದ ಪ್ರಾರಂಭವಾದ ಘಟಗಳ ಮೆರವಣಿಗೆ ಸಿದ್ಧಾರ್ಥನಗರ, ಕೀರ್ತಿ ನಗರ, ಗಂಗಾಮತ ಬೀದಿ, ಅಶೋಕನಗರ, ಬಸವಲಿಂಗಪ್ಪ ನಗರದ ಮಹಿಳೆಯರು ಪ್ರತ್ಯೇಕವಾಗಿ ಮೆರವಣಿಗೆಯಲ್ಲಿ ಸಾಗಿ ಪಟ್ಟಲದಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.  
ಸಿಡಿಬಂಡಿಗೆ ಚಾಲನೆ: 
ಒಂದೆಡೆ ಘಟಗಳ ಮೆರವಣಿಗೆ ನಡೆಯುತ್ತಿದ್ದರೆ ತಡರಾತ್ರಿ ವೇಳೆಗೆ ಕೋಟೆ ಬೀದಿಯಲ್ಲಿರುವ ಪಟೇಲರ ಚಿನ್ನೇಗೌಡರ ಕುಟುಂಬದವರು ಸಿಡಿಬಂಡಿಗೆ ಪೂಜೆ ಸಲ್ಲಿಸುವ ಮೂಲಕ ಸಾರಂಗಪಾಣಿ ದೇವಸ್ಥಾನದ ಬಳಿ ಸಿಡಿಬಂಡಿ ಎಳೆದೊಯ್ದು ಅಲ್ಲಿ (ಮನುಷ್ಯ ಆಕೃತಿಯ ಕಂಚಿನ ಪ್ರತಿಮೆ) ಸಿಡಿರಣ್ಣನನ್ನು ಕಟ್ಟಿ ಪೂಜೆ ಸಲ್ಲಿಸಿ ತಡರಾತ್ರಿ 1.30 ರ ವೇಳೆಗೆ ಚಾಲನೆ ನೀಡಲಾಯಿತು. ನಂತರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಸಿಡಿಬಂಡಿ ಶನಿವಾರ ಬೆಳಗ್ಗೆ 10 ಗಂಟೆ ವೇಳೆಗೆ ದೇವಸ್ಥಾನದ ಆವರಣಕ್ಕೆ ಆಗಮಿಸಿತು. ಬಳಿಕ ಮೂರು ಸುತ್ತು ಸುತ್ತಿಸಿ ಸಿಡಿ ಸಮಪ್ತಿಗೊಳಿಸಲಾಯಿತು. 
ಈ ಸಂದರ್ಭದಲ್ಲಿ ಜಮಾವಣೆಗೊಂಡಿದ್ದ ಭಕ್ತರು ಸಿಡಿರಣ್ಣನಿಗೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸುವರು. ಇದೇ ವೆಳೆ  ದೇವಸ್ಥಾನದ ಮುಂಭಾಗದಲ್ಲಿ ಕೊಂಡೋತ್ಸವ ಜರುಗಿತು. ಭಕ್ತ ಸಮೂಹ ಸರದಿಯಲ್ಲಿ ಬಂದು ಪಟ್ಟಲದಮ್ಮ ದೇವಿಯರ ದರ್ಶನ ಪಡೆದು ಪೂಜೆ ಸಲ್ಲಿಸುವ ಮೂಲಕ ಸಿಡಿಹಬ್ಬಕ್ಕೆ ತೆರೆ ಬಿದ್ದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net