ಸಂಭ್ರಮದ ರೇಣುಕಾ ಎಲ್ಲಮ್ಮದೇವಿ ಜಾತ್ರಾ ಮಹೋತ್ಸವ

ಮದ್ದೂರು ನಗರದ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು.
ಮದ್ದೂರು ನಗರದ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯನ್ನು ವಿಶೇಷವಾಗಿ ಅಲಂಕಾರ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹೊಳೆ ಬೀದಿ
  • ರೇಣುಕಾ ಎಲ್ಲಮ್ಮದೇವಿ
ಮದ್ದೂರು: ನಗರದ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮದೇವಿಯ 54 ನೇ ವರ್ಷದ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.
ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ 6.30 ಕ್ಕೆ ಮೂಲ ದೇವರಿಗೆ ಅನುಜ್ಞೆ ಹಾಗೂ ಗಣಪತಿ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕಳಸ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಭರತ ಹುಣ್ಣಿಮೆ ಅಂಗವಾಗಿ ಭಾನುವಾರ ಬೆಳಗ್ಗೆ 8.30 ಕ್ಕೆ ಮಹಾಚಂಡಿಕಾಯಾಗ ಶಾಸ್ತ್ರೋಕ್ತವಾಗಿ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಮಧ್ಯಾಹ್ನ 12.30 ಕ್ಕೆ ಮುತ್ತೈದೆಯರಿಂದ ತಂಬಿಟ್ಟಿನ ಆರತಿ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ 1 ರಿಂದ 4 ಗಂಟೆವರೆಗೆ ಸಾವಿರಾರು ಭಕ್ತರಿಗೆ ವ್ಯವಸ್ಥಿತವಾಗಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. 4.15 ರಿಂದ ಸಂಜೆ 5.30 ರವರೆಗೆ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಲೋತ್ಸವವನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ರಾತ್ರಿ 7 ಕ್ಕೆ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಿತು. ವಿವಿಧ ಹೂವು ಹಾಗೂ ದೀಪಾಲಂಕಾರದಿಂದ ಪಲ್ಲಕ್ಕಿ ಉತ್ಸವ ಕೊಂಗೊಳಿಸುತ್ತಿತ್ತು.
ತಿರುಪತಿ ತಿರುಮಲ ದೇವಸ್ಥಾನದ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ,. ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್ ಸೇರಿದಂತೆ ಮದ್ದೂರಮ್ಮನವರ ಪೂಜಾ ಕುಣಿತ, ದಂಡಿನಮಾರಮ್ಮನವರ ಪೂಜಾ ಕುಣಿತ, ಕಲಾವಿದರಿಂದ ತಮಟೆ, ನಗಾರಿ, ಜಾನಪದ ಮೇಳ ಗಮನ ಸೆಳೆಯಿತು.
ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಾದ ಹೊಳೆ ಬೀದಿ, ಒಕ್ಕಲಿಗರ ಬೀದಿ, ಸೋಮೇಗೌಡರ ಬೀದಿ, ಪೇಟೆ ಬೀದಿ, ದೊಡ್ಡಿ ಬೀದಿ, ಮೇಗಳ ಬೀದಿ, ಗಂಗ ಮತಸ್ಥರ ಬೀದಿ ಸೇರಿದಂತೆ ಹಲವು ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿ ಸೋಮವಾರ ಮುಂಜಾನೆವರೆಗೂ ನಡೆಯಿತು. ನಂತರ ದೇವಸ್ಥಾನದ ಮೂಲಸ್ಥಾನ ತಲುಪುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net