ತೆರಿಗೆ ಹಣ ಜನಾಭಿವೃದ್ಧಿಗೆ ಸಹಕಾರ

ಪಾಂಡವಪುರ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದ ಭೂಮಿ ಪೂಜೆ ಹಾಗೂ ಅಭಿನಂದನಾ ಸಮಾರಂಭವನ್ನು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಉದ್ಘಾಟಿಸಿದರು. ಸುನೀತಾ ಪುಟ್ಟಣ್ಣಯ್ಯ, ಎ.ಎಲ್.ಕೆಂಪೂಗೌಡ ಇತರರು ಇದ್ದರು.
ಪಾಂಡವಪುರ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದ ಭೂಮಿ ಪೂಜೆ ಹಾಗೂ ಅಭಿನಂದನಾ ಸಮಾರಂಭವನ್ನು ಶಾಸಕ ದರ್ಶನ್‌ಪುಟ್ಟಣ್ಣಯ್ಯ ಉದ್ಘಾಟಿಸಿದರು. ಸುನೀತಾ ಪುಟ್ಟಣ್ಣಯ್ಯ, ಎ.ಎಲ್.ಕೆಂಪೂಗೌಡ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಮತ
  • ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ
ಪಾಂಡವಪುರ: ತಾಲೂಕಿನ ಕಣಿವೆಕೊಪ್ಪಲು ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಒದಗಿಸಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗ್ರಾಮಸ್ಥರು ಶುಕ್ರವಾರ ಅಭೂತಪೂರ್ವವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.
ಬಹುದಿನಗಳ ಬೇಡಿಕೆಯಾಗಿದ್ದ ಕಣಿವೆಕೊಪ್ಪಲು ಗೇಟ್‌ನಿಂದ ಗ್ರಾಮದವರೆಗಿನ ಮುಖ್ಯ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 2.10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಭೂಮಿಪೂಜೆ ನೆರವೇರಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಮಹಿಳೆಯರು ಸಾಂಪ್ರದಾಯಿಕ ಪೂರ್ಣಕುಂಭ ಕಳಸ ಹೊತ್ತು ಸ್ವಾಗತಿಸಿದರು.
ನಂತರ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕ್ಷೇತ್ರದಾದ್ಯಂತ ಮಾಡಲಾಗುತ್ತಿರುವ ಅಭಿವೃದ್ಧಿ ಜನ ಸರ್ಕಾರಕ್ಕೆ ಕಟ್ಟುವ ತೆರಿಗೆ ಹಣವನ್ನು ಗ್ರಾಮಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಜನರ ದುಡ್ಡನ್ನು ಜನರಿಗೆ ಕೊಡುತ್ತಿದ್ದೇನೆ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಸಹಕಾರ ನೀಡಿದ ಪರಿಣಾಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿ ಇನ್ನೂ ಬಹಳಷ್ಟು ಕೆಲಸ ಆಗಬೇಕಿದೆ. ಹೀಗಾಗಿ ಮುಂದೆಯೂ ಎಲ್ಲರ ಸಹಕಾರದಿಂದ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ ಎಂದರಲ್ಲದೆ, ಗ್ರಾಮೀಣ ಪ್ರದೇಶದ ರಸ್ತೆಗಳು, ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಗ್ರಾಮಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸುವುದು ಮತ್ತು ದೇವಸ್ಥಾನ ಅಭಿವೃದ್ಧಿ ಹಾಗೂ ಸಮುದಾಯ ಭವನ ನಿರ್ಮಾಣ ನಮ್ಮ ಆದ್ಯ ಕರ್ತವ್ಯವಾಗಿದೆ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಹಳ್ಳಿಗಳು ಅಭಿವೃದ್ಧಿಗೊಂಡು ರೈತರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ಸಾವಯವ ಕೃಷಿಯೊಂದಿಗೆ ಗುಡಿ ಕೈಗಾರಿಕೆಗಳನ್ನು ಅಳವಡಿಸಿಕೊಂಡು ರೈತರು ಆದಾಯದ ಮೂಲ ಕಂಡುಕೊಳ್ಳಬೇಕಿದೆ. ರಾಜ್ಯ ಸರ್ಕಾರ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಿದೆ. ಮಾರುಕಟ್ಟೆಯಲ್ಲಿ ಸಾವಯವ ಬೆಳೆಗಳಿಗೆ ತುಂಬ ಬೇಡಿಕೆ ಇದೆ. ಅದಕ್ಕಾಗಿಯೇ ಪಟ್ಟಣದ ತಾ.ಪಂ. ಆವರಣದಲ್ಲಿ ಸಾವಯವ ಸಂತೆಯನ್ನು ಸಹ ಆರಂಭಿಸಲಾಗಿದೆ. ನಾವೆಲ್ಲರೂ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಿಕೊಂಡು ಸಾವಯವ ಕೃಷಿಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ದಸಂಸ ಮುಖಂಡ ಕಣಿವೆರಾಮು ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟಿದ್ದಾರೆ. ಆ ನಿಟ್ಟಿನಲ್ಲಿಯೇ ಕೆಲಸ ಮಾಡುತ್ತಿದ್ದು, ಕಣಿವೆಕೊಪ್ಪಲು ಗ್ರಾಮಕ್ಕೆ ಸುಮಾರು 5 ಕೋಟಿಗೂ ಅನುದಾನ ಒದಗಿಸಿ ಗ್ರಾಮವನ್ನು ತಾಲೂಕಿನ ಮಾದರಿಯನ್ನಾಗಿಸಿದ್ದಾರೆ. ಅದೇ ರೀತಿ ಹೊನ್ನಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಎಲ್ಲ ಗ್ರಾಮಗಳಿಗೂ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮಗಳ ಅಭಿವೃದ್ಧಿಗೆ ನೀಡಿರುವಷ್ಟು ಒತ್ತನ್ನು ಕ್ಷೇತ್ರದ ಬೇರ‌್ಯಾವ ಮಾಜಿ ಶಾಸಕರು ನೀಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮ ನಿಮ್ಮೊಡನೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
ರೈತನಾಯಕಿ ಸುನೀತಾಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ .ಮಂಜುನಾಥ್, ಕಾರ್ಯದರ್ಶಿ ಡಾಮಡಹಳ್ಳಿ ಅಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ಮುಖಂರಾದ ಕೆ.ಟಿ.ಗೋವಿಂದೇಗೌಡ, ರಾಘವಪ್ರಕಾಶ್, ರೂಪನಿತೀನ್, ಕಣಿವೆರಾಮು, ಬಿ.ಜೆ.ಸ್ವಾಮಿ, ಮರೀಗೌಡ, ಶೇಖರ, ರಾಮಚಂದ್ರ, ಸಂದೇಶ, ಗೋವಿಂದರಾಜು, ಮಂಜೇಶ, ದಿವಾಕರ, ಜವರ, ಶಶಾಂಕ್, ಸಿದ್ದಲಿಂಗೇಗೌಡ, ರಾಜು, ರಮೇಶ್, ಸತೀಶ್, ಗೋಪಾಲಕೃಷ್ಣ, ಕಾಂತರಾಜು, ಜಯರಾಮು, ಪಾಪೇಗೌಡ, ಸುಬ್ಬೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net