ಹಾಸ್ಟೆಲ್ ನಿರ್ಮಾಣಕ್ಕೆ ಕೇಂದ್ರ ಸಚಿವರಿಂದ ಅನುದಾನ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ

ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧಿಭವನದಲ್ಲಿ ಅಭಿನಂದನಾ ಸಮಾರಂಭ
  • ನಿಜಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರಿ ಸಂಘ, ತಾಲೂಕು ಮಹಿಳಾ ಗಂಗಾಮತಸ್ಥರ ಬೆಸ್ತರ ಸಂಘದಿಂದ ಆಯೋಜನೆ
ಮಂಡ್ಯ: ಗಂಗಾಮತಸ್ಥರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅನುದಾನ ನೀಡಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ಗಾಂಧಿಭವನದಲ್ಲಿ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರಿ ಸಂಘ, ತಾಲೂಕು ಮಹಿಳಾ ಗಂಗಾಮತಸ್ಥರ ಬೆಸ್ತರ ಸಂಘದಿಂದ ಆಯೋಜಿಸಿದ್ದ ನೂತನ ಸೌಹಾರ್ದ ಸಹಕಾರಿ ಸಂಘದ ಕಾರ್ಯಾಲಯಕ್ಕೆ ಚಾಲನೆ ಮತ್ತು ಗಂಗಾ ಪ್ರತಿಭಾ ಪುರಸ್ಕಾರ-ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿಆರ್‌ಎಸ್ ಅನುದಾನದಲ್ಲಿ ಸದ್ಯಕ್ಕೆ ಸ್ವಲ್ಪ ಅನುದಾನ ಬಿಡುಗಡೆ ಮಾಡಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೆರವಾಗಿದ್ದಾರೆ. ಸ್ಥಳೀಯ ಶಾಸಕರು ತಮ್ಮ ಅನುದಾನ ನೀಡುವ ಭರವಸೆ ನೀಡಿರುವ ವಿಚಾರವನ್ನು ಸಂಘವು ತಿಳಿಸಿದೆ ಎಂದು ನುಡಿದರು.
ಮುಂದಿನ ದಿನಗಳಲ್ಲಿ ಎಲ್ಲರೂ ಜವಾಬ್ದಾರಿ ತೆಗೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ. ಸಮುದಾಯಗಳ ಅಭಿವೃದ್ಧಿಗೆ ಕಾಳಜಿ ವಹಿಸಿರುವ ನಿಮ್ಮೆಲ್ಲರ ಆಶಯಗಳು ಈಡೇರಲಿವೆ. ಗಂಗಮತಸ್ಥ-ಬೆಸ್ತರ್ ಸಮುದಾಯವನ್ನು ಎಸ್.ಟಿ ಮೀಸಲು ಪಟ್ಟಿಗೆ ಸೇರಿಸಬೇಕೆನ್ನುವ ಹೋರಾಟ ಹಲವು ವರ್ಷದಿಂದ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವರ ಗಮನ ಸಳೆದು ಈ ಮಾಹಿತಿಯನ್ನು ಮತ್ತೊಮ್ಮೆ ಪ್ರಸ್ತಾಪಿಸುತ್ತೇವೆ. ಸಮುದಾಯ ಆರ್ಥಿಕವಾಗಿ ಬೆಳೆಯಲು ಹಣಕಾಸಿನ ಸಾಲ ಸೌಲಭ್ಯಕ್ಕಾಗಿ ಸಹಕಾರ ಸಂಘ ನೆರವಾಗಲಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಸಮುದಾಯಗಳ ಆಸ್ತಿಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.
ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಿ.ಲಿಂಗಯ್ಯ, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಸ್.ರಮೇಶ್, ಹಿಂದುಳಿದ ವರ್ಗಗಳ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಡಾ.ಡಿ.ಜಯರಾಮು, ಗಂಗಾಮತಸ್ಥರ ಬೆಸ್ತರ ಸಂಘದ ಅಧ್ಯಕ್ಷೆ ಹೊಳಲು ಲಿಂಗರಾಜಮ್ಮ, ಪದಾಧಿಕಾರಿಗಳಾದ ಎಚ್.ಎಸ್.ಉಮೇಶ್ ಹಾಡ್ಯ, ಈರಯ್ಯ, ಕುಮಾರ್, ಹೊನ್ನಪ್ಪ ಇತರರಿದ್ದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಅಭಿನಂದಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net