ವಾರದೊಳಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಿ

ಸಿಂಧಘಟ್ಟ ಗ್ರಾಮದ ಸರ್ಕಾರಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದರು.
ಸಿಂಧಘಟ್ಟ ಗ್ರಾಮದ ಸರ್ಕಾರಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅಗತ್ಯ ಮಾಹಿತಿ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಪಂ ಸಿಇಒ ನಂದಿನಿ ಸೂಚನೆ
  • ಸಿಂಧಘಟ್ಟ ಶಾಲೆಯಲ್ಲಿ ಕನ್ನಡ ಪಠ್ಯ ಬೋಧನೆ ನಡೆಯುತ್ತಿಲ್ಲ ಎಂಬ ಹಿನ್ನೆಲೆ
ಕೆ.ಆರ್.ಪೇಟೆ: ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕನ್ನಡ ಪಠ್ಯ ಬೋಧನೆ ಕುರಿತು ಪರಿಶೀಲಿಸಿ ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಸೂಚಿಸಿದರು.
ತಾಲೂಕಿನ ಸಿಂಧಘಟ್ಟ ಗ್ರಾಮದಲ್ಲಿರುವ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಶಾಲೆಗೆ ಬುಧವಾರ ಭೇಟಿ ನೀಡಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ವೇಳೆ, ಕನ್ನಡ ಪಠ್ಯವನ್ನು ಸರಿಯಾಗಿ ಬೋಧನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಿಇಒ ಗಮನ ಸೆಳೆದರು.
ಮಧ್ಯಾಹ್ನದ ಬಿಸಿಯೂಟಕ್ಕೆಂದು ಶಾಲೆಗೆ ಸರಬರಾಜಾಗಿರುವ ಅಡುಗೆ ಎಣ್ಣೆಯ ಅವಧಿ ಮುಕ್ತಾಯವಾಗಿರುವುದನ್ನು ಗಮನಿಸಲಾಗಿದ್ದು, ಈ ಸಂಬಂಧ ಯೋಜನೆಯ ಶಿಕ್ಷಣಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಪರಿಶೀಲಿಸಿ ವರದಿ ನೀಡುವಂತೆ ಸಿಇಒ ಸೂಚಿಸಿದರು.
ಇನ್ನು ಗ್ರಾಮದಲ್ಲಿನ 3 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಕಲಿಕೆಯ ವಿಧಾನ, ಪೌಷ್ಟಿಕ ಆಹಾರ ವಿತರಣೆ, ಮೂಲಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಅಂಗನವಾಡಿಯ ಅಂಗವಿಕಲ ಕಾರ್ಯಕರ್ತೆ ತುಳಸಿ ಅವರ ಕಾರ್ಯವನ್ನು ಪ್ರಶಂಸಿಸಿದರು. ಬಳಿಕ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರು ಮತ್ತು ರೋಗಿಗಳೊಂದಿಗೆ ಸಂವಾದ ನಡೆಸಿದರಲ್ಲದೆ, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಚಿಕಿತ್ಸೆ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆ ನಡುವೆಯೂ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದರು.
ಇನ್ನು ಪಶು ಆಸ್ಪತ್ರೆಗೆ ಭೇಟಿ ನೀಡಿ ಔಷಧಗಳ ಸಂಗ್ರಹ, ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯ ಹಾಗೂ ಲಸಿಕೆಯ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆ ವ್ಯಾಪ್ತಿಯಲ್ಲಿ ಗ್ರಾಮಗಳಲ್ಲಿನ ಪಶುಗಳ ಸಂಖ್ಯೆಗೆ ಅನುಗುಣವಾಗಿ ಔಷಧಗಳ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಅಂತೆಯೆ ಗ್ರಾಮ ಪಂಚಾಯಿತಿ ಕಚೇರಿಯ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ನಿರ್ವಹಣೆ ಮತ್ತು ಗ್ರಂಥಾಲಯದಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ ಸಿಇಒ, ಪಿಡಿಒ ವಾಣಿ ಹಾಗೂ ಗ್ರಂಥಪಾಲಕಿ ವಸಂತಮ್ಮ ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಗ್ರಾಪಂನಲ್ಲಿ 2 ಗ್ರಂಥಾಲಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಅಭಿಲೇಖಾಲಯಕ್ಕೆ ಭೇಟಿ ನೀಡಿ ಗ್ರಾಪಂ ಕಡತಗಳು ಮತ್ತು ಇ-ಸ್ವತ್ತು ದಾಖಲೆಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಪರಿಶೀಲಿಸಿದರು. ಅಭಿಲೇಖಾಲಯದ ನಿರ್ವಹಣೆ ಕಾಮಗಾರಿ ಪ್ರಗತಿಯಲ್ಲಿದೆ. ಕಡತಗಳನ್ನು ಎ, ಬಿ, ಸಿ, ಡಿ ಎಂದು ವಿಂಗಡಿಸಲಾಗುತ್ತಿದ್ದು ಒಂದು ತಿಂಗಳೊಳಗಾಗಿ ಅಭಿಲೇಖಾಲಯ ಪೂರ್ಣಗೊಳಿಸಲಾಗುವುದು ಎಂದು ಪಿಡಿಇ ಇದೇ ವೇಳೆ ಮಾಹಿತಿ ನೀಡಿದರು.
ಇನ್ನು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸುತ್ತಿರುವ ಹಾಗೂ ಶೌಚಗೃಹ, ಮಲಗುವ ಕೋಣೆ ಸೇರಿದಂತೆ ಇತರ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಅಲ್ಲದೆ ವಸತಿನಿಲಯಗಳಲ್ಲಿನ ಕುಂದುಕೊರತೆ ಆಲಿಸಲು ನೀಡಲಾಗಿರುವ ಸಹಾಯವಾಣಿ ಸಂಖ್ಯೆಯನ್ನು ಹಾಸ್ಟೆಲ್ನ ಊಟದ ಹಾಲ್, ನೋಟಿಸ್ ಬೋರ್ಡ್ ಸೇರಿದಂತೆ ಇತರ ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರುದ್ರೇಶ್, ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಯತೀಶ್, ಪಂಚಾಯಿತಿಅಭಿವೃದ್ಧಿ ಅಧಿಕಾರಿ ವಾಣಿ ಸೇರಿದಂತೆ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net