ಮಹಿಳೆಯರಿಗೆ ನೆರವಾದ ಗ್ಯಾರಂಟಿ: ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಅಭಿಮತ

ಮಂಡ್ಯ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭವನ್ನು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಉದ್ಘಾಟಿಸಿದರು.
ಮಂಡ್ಯ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭವನ್ನು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೇಮಕಾತಿ ಆದೇಶ ಪತ್ರ ವಿತರಣೆ
  • ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆ
ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರಿ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಅಭಿಪ್ರಾಯಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಘಟಕದಿಂದ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಮತ್ತು ವಿವಿಧ ಹುದ್ದೆಗಳ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ. ಮಹಿಳಾ ಸಬಲೀಕರಣದ ಉದ್ದೇಶದೊಂದಿಗೆ ಜಾರಿಗೊಳಿಸಿದ ಯೋಜನೆ ಇಂದು ಸಫಲತೆ ಕಾಣುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ನೀಡುತ್ತಿರುವ ಹಣವನ್ನು ಕೂಡಿಟ್ಟು ಸ್ವಂತ ಉದ್ಯಮ ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಶಕ್ತಿ ಯೋಜನೆಗೆ ಪ್ರಶಸ್ತಿ ಬಂದಿದೆ. ಈ ಯೋಜನೆಯಿಂದ ಕೋಟ್ಯಂತರ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಹತ್ವದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ್ದಾರೆ. ಜಿಲ್ಲೆಯ ಜನರ ಬಹು ವರ್ಷದ ಕನಸಾಗಿದ್ದ ಕೃಷಿ ವಿಶ್ವವಿದ್ಯಾಲಯನ್ನು ಪ್ರಾರಂಭಿಸಿದರು. ಇದು ಜಿಲ್ಲೆಗೆ ಸಿಕ್ಕ ದೊಡ್ಡ ಕೊಡುಗೆ. ಕೃಷಿ ಪ್ರಧಾನ ಜಿಲ್ಲೆಗೆ ವಿಶ್ವವಿದ್ಯಾಲಯ ಮುಕುಟದಂತಾಗಿದೆ. ವಿವಿ ಪ್ರಾರಂಭವಾದ ನಂತರ ನಡೆದ ಮೊದಲ ವರ್ಷದ ರಾಜ್ಯಮಟ್ಟದ ಕೃಷಿ ಮೇಳ ಅಭೂತಪೂರ್ವ ಯಶಸ್ಸು ಕಂಡಿತು. ಹತ್ತು ಲಕ್ಷಕ್ಕೂ ಹೆಚ್ಚು ಜನ ಕೃಷಿಮೇಳದಲ್ಲಿ ಪಾಲ್ಗೊಂಡರು. ಅಂತೆಯೇ ಕೃಷಿ ವಿವಿ ಪ್ರಾರಂಭದಿಂದಾಗುವ ಅನುಕೂಲ ಯಾವ ರೀತಿಯಾಗಲಿದೆ ಎನ್ನುವುದು ಮುಂದಿನ ದಿನದಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.
ಇನ್ನು ಶಾಸಕ ಪಿ.ರವಿಕುಮಾರ್ ಗಣಿಗ ಅವರು ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುತ್ತಿದ್ದಾರೆ. ನಾಲೆಗಳ ಆಧುನೀಕರಣದ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕೆಆರ್‌ಎಸ್ ಡ್ಯಾಂನಿಂದ ನೀರು ಬಿಟ್ಟರೆ ರೈತರ ಜಮೀನು ತಲುಪಲು ಮೂರು ದಿನ ಬೇಕಿತ್ತು. ಆದರೀಗ ಕೆಲವೇ ಗಂಟೆಯಲ್ಲಿ ಹರಿದು ಬರುತ್ತಿದೆ. ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್ ಗಣಿಗ ಅವರು ಜೋಡೆತ್ತಿನಂತೆ ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಜನರ ನಡುವೆ ನಿಂತು ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಹಕಾರ ನೀಡುವ ಕೆಲಸ ಮಾಡೋಣ. ಮುಂದಿನ ಚುಣಾವಣೆಗಳಲ್ಲಿ ಮಹಿಳೆಯರು ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಈಗಿಂದಲೇ ಸನ್ನದ್ದರಾಗಬೇಕು. ಮುಖ್ಯವಾಗಿ ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶುಭಧಾಯಿನಿ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾವಾಗಲೂ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಅಭಿವೃದ್ದಿಗೆ ಹೆಚ್ಚು ಆದ್ಯತೆ ನೀಡಿದೆ. ಸ್ವಾತಂತ್ರೃ ನಂತರದ ಭಾರತದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷ ಹತ್ತಾರು ಯೋಜನೆ ಜಾರಿ ಮಾಡಿದೆ. ಉದ್ಯೋಗ, ಉದ್ಯಮ, ಆರ್ಥಿಕ ಭದ್ರತೆ, ಶೈಕ್ಷಣಿಕ ನೆರವು, ಸಾಲ ಸೌಲಭ್ಯ ಹೀಗೆ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಹಿಳಾ ಪ್ರಗತಿಗೆ ಮುಂದಾಗಿದೆ ಎಂದು ಹೇಳಿದರು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಮಹಿಳೆಯರಿಗೆ ಸಮರ್ಪಿಸಿದೆ. ಈ ಮೂಲಕ ಮಹಿಳಾಭ್ಯುದಯ ಸರ್ಕಾರವಾಗಿದೆ. ಎಲ್ಲರಿಗೂ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಬಲೀಕರಣಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇಂದಿನಿಂದಲೇ ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ ಕಾರ್ಯಕರ್ತರನ್ನು ಸಂಘಟಿಸಿ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಮಹಿಳೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ, ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿಯೆತ್ತಬೇಕು ಎಂದು ಸಲಹೆ ನೀಡಿದರು.
ಮುಂದಿನ ಸವಾಲುಗಳನ್ನು ಎದುರಿಸುವ ರಾಜಕೀಯ ಪ್ರಜ್ಞೆ ಹೆಚ್ಚಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಸೇರಿದಂತೆ ಸಾಲು ಸಾಲು ಚುನಾವಣೆ ಎದುರಾಗಲಿವೆ. ಆಗ ಮಹಿಳೆಯರ ಪಾತ್ರ ನಿರ್ಣಾಯಕವಾಗಿರುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸೋಣ. ನಾಯಕತ್ವದ ಅವಕಾಶವನ್ನು ಬಳಸಿಕೊಂಡು ಪಕ್ಷದ ತತ್ವ ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಯುವ ನಾಯಕ ಬಿ.ರೇವಣ್ಣ, ತಾ.ಪಂ ಮಾಜಿ ಸದಸ್ಯ ಪ್ರಶಾಂತ್‌ಬಾಬು, ಸುಜಾತಾ ಸಿದ್ದಯ್ಯ, ಸುನೀತಾ ರಾಜೇಶ್, ಜ್ಯೋತಿ, ಶಕುಂತಲಾ, ಪ್ರಚಾರ ಸಮಿತಿ ನಗರಾಧ್ಯಕ್ಷ ಅಭಿಲಾಷ್, ಕಚೇರಿ ವ್ಯವಸ್ಥಾಪಕ ಪ್ರಕಾಶ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷೆ ಶಾರದಾ ರಮೇಶ್, ಸಂಘಟನಾ ಕಾರ್ಯದರ್ಶಿ ವೀಣಾ ಶಂಕರ್ ಸೇರಿದಂತೆ ಹಲವರಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net