ಬೆಂಗಳೂರಿನ ಅಹೋರಾತ್ರಿ ಧರಣಿಗೆ ಬೆಂಬಲ: ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿದ ಮಡಿವಾಳ ಸಮುದಾಯ

  ಬೆಂಗಳೂರಿನಲ್ಲಿ ನಡೆಯಲಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಮಡಿವಾಳ ಸಮುದಾಯದ ಜನರು ಮಂಡ್ಯದಿಂದ ತೆರಳಿದರು.
ಬೆಂಗಳೂರಿನಲ್ಲಿ ನಡೆಯಲಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಮಡಿವಾಳ ಸಮುದಾಯದ ಜನರು ಮಂಡ್ಯದಿಂದ ತೆರಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಆಗ್ರಹ
  • ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದೇವೆಂದು ಆಕ್ರೋಶ
ಮಂಡ್ಯ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಅಹೋರಾತ್ರಿ ಪ್ರತಿಭಟನೆ ಬೆಂಬಲಿಸಿ ಸಮುದಾಯದ ಜನರು ಬೆಂಗಳೂರಿಗೆ ತೆರಳಿದರು.
ನಗರದ ರೈತ ಸಭಾಂಗಣದ ಆವರಣದಿಂದ ತೆರಳಿದರು. ಇದಕ್ಕೂ ಮುನ್ನ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಡಿ.ರಮೇಶ್ ಮಾತನಾಡಿ, ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯಲಿರುವ ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿದ್ದೇವೆ. ಈ ಹಿಂದೆ ಸಮಾಜದ ಸ್ವಾಮೀಜಿಗಳು ಹಾಗೂ ಹಿರಿಯರು ಹೋರಾಟ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ವರದಿಯನ್ನು ಸ್ವೀಕರಿಸಿದೆ. ಆದರೆ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡದೇ ನಿರ್ಲಕ್ಷೃ ವಹಿಸಲಾಗಿದೆ. ಹೀಗಾಗಿ ಈಗ ಸಂಘಟಿತರಾಗಿ ಹಕ್ಕನ್ನು ಪಡೆದುಕೊಳ್ಳಬೇಕಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಹೇಳಿದರು.
ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಸಮುದಾಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ತುಂಬಾ ಹಿಂದುಳಿದಿದೆ. ಇದನ್ನು ಪರಿಗಣಿಸಿ ದೇಶದ 18 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶದಲ್ಲಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಆ ಕ್ರಮವನ್ನು ನಮ್ಮಲ್ಲೂ ಕೈಗೊಳ್ಳಲು ರಾಜ್ಯ ಸರ್ಕಾರ ಕಾಳಜಿ ಪ್ರದರ್ಶಿಸಬೇಕು. ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇದು ಬಹಳ ಅಗತ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಡಿವಾಳ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಮ್ಮ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಸಮುದಾಯದ ಮುಖಂಡರಾದ ಹಳುವಾಡಿ ವೆಂಕಟೇಶ್, ಸಿದ್ದಶೆಟ್ಟಿ, ಎನ್.ಸೋಮಶೇಖರ್, ಶಿವಮಾದು, ರಘು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net