ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಮಲ್ಲಿಕ್ಯಾತನಹಳ್ಳಿ ಹಾಗೂ ಬ್ಲಫ್ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಮಂಗಳವಾರ ಪ್ರಾಂತ ರೈತ ಸಂಘದ ಕಾರ್ಯಕರ್ತೆ ಜತೆಗೂಡಿ ಪ್ರತಿಭಟನೆ ನಡೆಸಿ ಗ್ರಾಮ ಕಾರ್ಯದರ್ಶಿ ಶಿವರಾಮು ರವರಿಗೆ ಮನವಿ ಸಲ್ಲಿಸಿದರು. ಭರತ್ ರಾಜ್, ಗುರುಸ್ವಾಮಿ, ವಿಷಕಂಠ, ನಂಜುಡಸ್ವಾಮಿ, ಸಿದ್ದರಾಜು, ಮಹದೇವಮ್ಮ, ಮಾದೇಶ, ವಿಮಲಾ, ನಾಗೇಂದ್ರಮೂರ್ತಿ ಇದ್ದರು.
ಮಳವಳ್ಳಿ: ಕಾವೇರಿ ನದಿ ನೀರನ್ನು ಶುದ್ಧೀಕರಿಸದೆ ನಮ್ಮ ಗ್ರಾಮಗಳಿಗೆ ಕುಡಿಯಲು ಪೂರೈಸುತ್ತಿದ್ದಾರೆ ಎಂದು ಆರೋಪಿಸಿ ಪ್ರಾಂತ ರೈತ ಸಂಘದ ಕಾರ್ಯಕರ್ತರ ಜತೆಗೂಡಿ ತಾಲೂಕಿನ ಬಿ.ಜಿ. ಪುರ ಹೋಬಳಿಯ ಬ್ಲಫ್ ಹಾಗೂ ಮಲ್ಲಿಕ್ಯಾತನಹಳ್ಳಿ ಗ್ರಾಮಸ್ಥರು ಹೊಸಹಳ್ಳಿ ಗ್ರಾಮ ಪಂಚಾಯಿತಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾವೇರಿ ನದಿಯಿಂದ ನಾಲಾ ಮೂಲಕ ಹರಿಯುವ ನೀರನ್ನು ಶುದ್ಧೀಕರಿಸದೆ ಗ್ರಾಮಗಳಿಗೆ ವಿತರಿಸುತ್ತಿರುವುದನ್ನು ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕಿವಿಗೊಡದ ಆಡಳಿತ ವರ್ಗದ ವಿರುದ್ಧ ಬೇಸತ್ತು ಗ್ರಾಮಸ್ಥರು ಹೋರಾಟಗಾರರ ಜತೆಗೂಡಿ ಗ್ರಾಪಂ ಕಚೇರಿ ಮುಂದೆ ಧರಣಿ ಕುಳಿತರು.
ಸಂಘಟನೆ ತಾಲೂಕು ಕಾರ್ಯದರ್ಶಿ ಗುರುಸ್ವಾಮಿ ಮಾತನಾಡಿ, ಈಗಾಗಲೇ ಬಿಸಿಲಿನ ಬೇಗೆಯಿಂದ ಜನರು ಕಂಗೆಟ್ಟು ಸಾಂಕ್ರಾಮಿಕ ರೋಗದ ಭೀತಿಯಿಂದ ಪರಿತಪಿಸುತ್ತಿದ್ದಾರೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕಾದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಾತ್ಸಾರ ಮನೋಭಾವದಿಂದ ನಡೆದುಕೊಳ್ಳುತ್ತಿದ್ದಾರೆ. ಮಲ್ಲಿಕ್ಯಾತನಹಳ್ಳಿ ಹಾಗೂ ಬ್ಲಫ್ ಗ್ರಾಮಗಳಿಗೆ ಪೂರೈಕೆಯಾಗುತ್ತಿರುವ ಅಶುದ್ಧ ನೀರಿನಿಂದಾಗಿ ಅಲ್ಲಿನ ಹಲವಾರು ನಿವಾಸಿಗಳು ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಮೇನ್ ಗೇಟ್ ಬಳಿ ಸ್ಥಾಪಿಸಬೇಕು. ಅಲ್ಲದೇ ಸಮರ್ಪಕವಾಗಿ ಗ್ರಾಮಗಳ ಎಲ್ಲ ಮನೆಗಳಿಗೂ ನೀರು ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಮೇನ್ ಗೇಟ್ ಬಳಿ ಅಥವಾ ನೇರವಾಗಿ ಟ್ಯಾಂಕ್‌ನಿಂದಲೇ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕೆಂದು ಆಗ್ರಹಿಸಿ ಗ್ರಾಪಂ ಕಚೇರಿಯ ಕಾರ್ಯದರ್ಶಿ ಶಿವರಾಮುಗೆ ಮನವಿ ನೀಡಲಾಯಿತು.
ಪ್ರತಿಭಟನೆಯಲ್ಲಿ ಪ್ರಾಂತ ರೈತಸಂಘದ ಸಂಚಾಲಕ ಎನ್. ಎಲ್. ಭರತ್ ರಾಜ್, ಮುಖಂಡರಾದ ವಿಷಕಂಠ, ನಂಜುಂಡಸ್ವಾಮಿ, ಸಿದ್ದರಾಜು, ಮಹದೇವಯ್ಯ, ಮಾದೇಶ್, ವಿಮಲಾ, ಮಹದೇವಮ್ಮ, ಪದ್ಮ, ಶಿವರಾಮ್, ತಾಯಮ್ಮ, ಪ್ರದೀಪ್ ನಾಗೇಂದ್ರ ಮೂರ್ತಿ, ರವಿ ಸೇರಿದಂತೆ ಎರಡೂ ಗ್ರಾಮಗಳ ಗ್ರಾಮಸ್ಥರು ಇದ್ದರು.