50 ರೂ.ಬಾಕಿ ನೀಡಿದದಷ್ಟೇ ಕಬ್ಬು ಪೂರೈಕೆ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೆ.ಎಂ.ದೊಡ್ಡಿಯ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಕುರಿತು ಮದ್ದೂರು ಹಾಗೂ ಕೆ.ಎಂ.ದೊಡ್ಡಿಯ ರೈತ ಮುಖಂಡರೊಂದಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸಭೆ ನಡೆಸಿ ಚರ್ಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೆ.ಎಂ.ದೊಡ್ಡಿಯ ಶ್ರೀಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಕುರಿತು ಮದ್ದೂರು ಹಾಗೂ ಕೆ.ಎಂ.ದೊಡ್ಡಿಯ ರೈತ ಮುಖಂಡರೊಂದಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸಭೆ ನಡೆಸಿ ಚರ್ಚಿಸಿದರು.
Published on
ಶ್ರೀರಂಗಪಟ್ಟಣ: ರಾಜ್ಯ ಸರ್ಕಾರದ ಘೋಷಣೆಯಂತೆ ನೀಡಲು ಬಾಕಿ ಉಳಿಸಿಕೊಂಡ 50 ರೂ. ಬೆಂಬಲ ಬೆಲೆ ನೀಡಿದ ಬಳಿಕವಷ್ಟೆ ರೈತರು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೇಗೌಡ್ರು ಕರೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಚಾಮುಂಡೇಶ್ವರಿ ಶುಗರ್ಸ್ ಕಂಪೆನಿ ಉಪಾಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮದ್ದೂರು, ಕೆ.ಎಂ.ದೊಡ್ಡಿ ಭಾಗದ ರೈತ ಮುಖಂಡರ ಸಭೆಯಲ್ಲಿ ರೈತ ಮುಖಂಡರೊಂದಿಗೆ ನಿರ್ಧಾರ ಪ್ರಕಟಿಸಿ ಮಾತನಾಡಿದರು.
ಈ ಹಿಂದೆ ಕಬ್ಬು ಬೆಳೆಗಾರರು ನಡೆಸಿದ್ದ ಹೋರಾಟದ ಹಿನ್ನೆಲೆ ರಾಜ್ಯಸರ್ಕಾರ ಮಾಡಿದ್ದ ಘೋಷಣೆಯಂತೆ ಕಬ್ಬಿನ ದರ 3,200 ರೂ. ಜತೆಗೆ ಸರ್ಕಾರದಿಂದ ರೂ.50 ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಂದ ರೂ.50 ಒಟ್ಟು ರೂ.100 ಸೇರಿ 3,300 ರೈತರಿಗೆ ನೀಡಲು ಸೂಚಿಸಿದ್ದು, ಈಗಾಗಲೇ ಉತ್ತರ ಕರ್ನಾಟಕದ ಸಾಕಷ್ಟು ಕಂಪನಿಗಳು ರೈತರಿಗೆ ಈ ಮಾದರಿಯಲ್ಲೇ ಪಾವತಿಸಿವೆ. ಆದರೆ ನಮ್ಮ ದಕ್ಷಿಣ ಕರ್ನಾಟಕ ಭಾಗದ 7 ಸಕ್ಕರೆ ಕಾರ್ಖಾನೆಗಳು ಈ ಆದೇಶ ಪ್ರಶ್ನಿಸಿ ತಡೆಹಿಡಿಯುವಂತೆ ನ್ಯಾಯಲಯದ ಮೊರೆ ಹೋಗಿದ್ದಾರೆ. ಇದೇ ನೆಪಹೇಳಿ ಇನ್ನು ಕೂಡ 50 ರೂ.ಗಳನ್ನು ರೈತರಿಗೆ ವಿತರಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಜು.5ರಿಂದ ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಪುನಃ ತರೆಯುತ್ತಿದ್ದು, ಈಗ ರೈತರು ಕಬ್ಬು ಪೂರೈಸುವಂತೆ ಮನವಿ ಮಾಡುತ್ತಿದ್ದಾರೆ ಹೊರತು ಬಾಕಿ ಹಣದ ವಿಚಾರ ಪ್ರಸ್ತಾಪವೇ ಇಲ್ಲ. ನಮ್ಮ ರೈತರು ಈ ವಿಚಾರದಲ್ಲಿ ಧೃಡ ನಿಲುವು ಹೊಂದಬೇಕಿದೆ. ಕಬ್ಬು ಪೂರೈಸಿದ್ದ ಬೆಳೆಗಾರರಿಗೆ ನೀಡಬೇಕಾದ ಬಾಕಿ 50 ರೂ. ಪಾವತಿಸಿದ ಬಳಿಕವಷ್ಟೇ ಕಬ್ಬು ನೀಡಬೇಕಿದ್ದು, ಈ ನಿಟ್ಟಿನಲ್ಲಿ ಕಂಪೆನಿ ಸಹ ರೈತರ ಹಿತಕಾಯಬೇಕು ಎಂದು ಆಗ್ರಹಿಸಿದರು.
ಕಂಪೆನಿ ಉಪಾಧ್ಯಕ್ಷ ಮಣಿ ರೈತರ ಮನವಿ ಆಲಿಸಿ ಆಡಳಿತದ ಗಮನಕ್ಕೆ ತರುವುದಾಗಿ ಭರವಸೆ ತಿಳಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಖಜಾಂಚಿ ರವಿಕುಮಾರ್, ಮದ್ದೂರು ತಾಲೂಕು ಅಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿ ವಿನೋದ್, ಪಾಂಡವಪುರ ತಾಲೂಕು ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ರಘು, ಶ್ರೀರಂಗಪಟ್ಟಣ ತಾಲೂಕು ಶಂಭುಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net