ಘರ್ಷಣೆಗೆ ಮುಂದಾದರೆ ಕಠಿಣ ಕ್ರಮ

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿದರು. ಯಶವಂತ್‌ಕುಮಾರ್, ಶಿವಕುಮಾರ್ ಬಿರಾದರ, ನವೀನ್, ನಾರಾಯಣ್, ಅನಿಲ್‌ಕುಮಾರ್ ಇದ್ದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿದರು. ಯಶವಂತ್‌ಕುಮಾರ್, ಶಿವಕುಮಾರ್ ಬಿರಾದರ, ನವೀನ್, ನಾರಾಯಣ್, ಅನಿಲ್‌ಕುಮಾರ್ ಇದ್ದರು.
Published on
ಮದ್ದೂರು: ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು, ಗಲಭೆಗಳು ಸಂಭವಿಸದಂತೆ ಆಯೋಜಕರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಪೊಲೀಸ್ ಇಲಾಖೆಯಿಂದ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಎಲ್ಲ ಧರ್ಮ, ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ನಗರಸಭೆ ಸೇರಿದಂತೆ ತಾಲೂಕಿನ ಎಲ್ಲ ವ್ಯಾಪ್ತಿಗಳಲ್ಲಿ ಮುಖ್ಯವಾಗಿ ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಂದ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದು ಸೂಚನೆಗಳನ್ನು ಪಾಲಿಸಬೇಕು ಎಂದರು.
ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ರಾತ್ರಿ 10ರ ನಂತರ ಧ್ವನಿ ವರ್ಧಕಗಳನ್ನು ಹಾಕಬಾರದು. ಆದಷ್ಟು ಸಭ್ಯ ಹಾಡುಗಳನಷ್ಟೇ ಹಾಕಬೇಕು. ಡಿಜೆ ಹಾಕುವಂತಿಲ್ಲ. ಒಂದು ವೇಳೆ ಸೂಚನೆ ಪಾಲಿಸದೆ ಡಿಜೆ ಹಾಕಿದರೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಈ ಬಾರಿ ಜಿಲ್ಲೆಯ ಎಲ್ಲ ವ್ಯಾಪ್ತಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗಳು ಸಾಗುವ ದಾರಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ವಿಸರ್ಜನೆ ಮಾಡುವ ಸಂದರ್ಭದಲ್ಲಿ ಅಗತ್ಯ ಬ್ಯಾರಿಕೇಡ್‌ಗಳು, ಈಜು ಪರಿಣಿತರು, ಸರಿಯಾದ ವಿದ್ಯುತ್ ದೀಪಗಳ ವ್ಯವಸ್ಥೆ ಸೇರಿದಂತೆ ಅಗತ್ಯ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸಬೇಕು. ರಾತ್ರಿಯಾಗುವ ಮುನ್ನವೇ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡಲು ಆಯೋಜಕರು ಮುಂದಾಗಬೇಕೆಂದು ಸಲಹೆ ನೀಡಿದರು.
ಗಣೇಶನ ಪ್ರತಿಷ್ಠಾಪನೆ ಅಥವಾ ವಿಸರ್ಜನೆ ಸಂದರ್ಭದಲ್ಲಿ ಅನಗತ್ಯವಾಗಿ ಗಲಭೆ ಅಥವಾ ಘರ್ಷಣೆ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹಬ್ಬವನ್ನು ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದು ಮನವಿ ಮಾಡಿದರು.
ಡಿವೈಎಸ್ಪಿ ಯಶವಂತ್‌ಕುಮಾರ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರ, ಸಿಪಿಐಗಳಾದ ನವೀನ್‌ಕುಮಾರ್, ನಾರಾಯಣ್, ಅನಿಲ್‌ಕುಮಾರ್, ಸೆಸ್ಕ್ ಇಇ ಶಿವಕುಮಾರ್, ತಾಪಂ ಎಒ ಗಂಗರಾಜು, ಪೊಲೀಸ್ ಸಿಬ್ಬಂದಿ ಉಪಸ್ಥಿತಿರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net