ಮಹಾತ್ಮ ಗಾಂಧೀಜಿ ಇಂದಿಗೂ ಪ್ರಸ್ತುತ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿಕೆ

ಮಂಡ್ಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ  ಉದ್ಘಾಟಿಸಿದರು.
ಮಂಡ್ಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರದಲ್ಲಿ ರಾಜ್ಯಮಟ್ಟದ ವಿಚಾರ ಮಂಥನ
  • ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂ, ಜಿಲ್ಲಾ ಯುವ ಪರಿಷತ್ ವತಿಯಿಂದ ಆಯೋಜನೆ
ಮಂಡ್ಯ: ಹಿಂಸೆ, ಅರಾಜಕತೆ, ಭ್ರಷ್ಟಾಚಾರ ತಾಂಡವಾಡುತ್ತಿರುವ ಈ ದಿನಗಳಲ್ಲಿ ಜಗತ್ತಿಗೆ ಅಹಿಂಸೆ, ವಿಶ್ವ ಭ್ರಾತೃತ್ವ, ಗ್ರಾಮ ಸ್ವರಾಜ್ಯ, ಸಮಾನತೆ, ಸರಳತೆಯ ಪಾಠ ಹೇಳಿಕೊಟ್ಟ ಮಹಾತ್ಮ ಗಾಂಧೀಜಿ ಇಂದಿಗೂ ಪ್ರಸ್ತುತ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ಹೇಳಿದರು.
ನಗರದ ಗಾಂಧಿಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ರಾಷ್ಟ್ರೀಯ ಸೇವಾ ಯೋಜನೆ ಕೃಷಿ ವಿಶ್ವವಿದ್ಯಾಲಯ ವಿ.ಸಿ ಫಾರಂ, ಜಿಲ್ಲಾ ಯುವ ಪರಿಷತ್ ವತಿಯಿಂದ ಯುವ ಮನಸ್ಸುಗಳಿಗೆ ಗಾಂಧಿ ವಿಷಯ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಕುಸಿದುಹೋಗಿವೆ. ಲೋಕಸಭೆಯಲ್ಲಿರುವ ಸದಸ್ಯರ ಪೈಕಿ ಶೇ.47ರಷ್ಟು ಸದಸ್ಯರು ಒಂದಲ್ಲ ಒಂದು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ಇದು ಆತಂಕಕಾರಿ. ಇಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಸಮಾಜ, ಸಾಮಾಜಿಕ, ನೈತಿಕ ಸ್ವಾತಂತ್ರೃ ಹಾಗೂ ಗಾಂಧಿ ಅವರ ಜೀವನ ಸಂದೇಶವನ್ನು ವಿವೇಚನಾತ್ಮಕವಾಗಿ ಚಿಂತಿಸಿದಲ್ಲಿ ಮೂಲಭೂತವಾದಿ ಹಾಗೂ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಬಹುದು. ಬಹುತ್ವದ ಚಿಂತನೆ ನಮ್ಮ ಶಕ್ತಿಯಾಗಿದೆ. ಗಾಂಧೀಜಿ ಪ್ರಪಂಚಕ್ಕೆ ಬೆಳಕಾದವರು ಎಂದು ಅಭಿಪ್ರಾಯಪಟ್ಟರು.
ರಾಜಕಾರಣ, ಸಾರ್ವಜನಿಕ ಜೀವನದಲ್ಲಿ ಅಧಿಕಾರ ಹಿಡಿಯುವುದು ದೊಡ್ಡ ಕೆಲಸವಾಗಿದೆ. ಸಮಾಜ ಓಟಿನ ಮೇಲೆ ನಿಂತಿದೆ. ಓಟು ಪಡೆಯಲು ವಾಮ ಮಾರ್ಗ ಅನುಸರಿಸುತ್ತಿರುವುದರ ಬಗ್ಗೆ ಸಮಾಜದಲ್ಲಿ ಕಾಣುತ್ತಿದ್ದೇವೆ. ಇದರ ಬಗ್ಗೆ ಚಿಂತಿಸ ಬೇಕಾಗಿದೆ ಎಂದ ಅವರು, ಯಾವ ನಾಯಕರಿಗೂ ರಾಷ್ಟ್ರದ ಹಿತ ಬೇಕಿಲ್ಲ. ಪಕ್ಷದಲ್ಲಿ ದೊಡ್ಡ ನಾಯಕರು ಇರಬಹುದು ಗೆಲ್ಲುವ ಜ್ಞಾನ ಇರಬಹುದು. ಅವರು ಅಧಿಕಾರ ಹೇಗೆ ಹಿಡಿಯಬೇಕು ಎನ್ನುವ ದೃಷ್ಟಿಯಲ್ಲಿ ಸಮಾಜದಲ್ಲಿ ಕೆಲಸ ಮಾಡುತ್ತಾರೆ. ಆದರೆ ಸಮಾಜ ಜೋಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಗಾಂಧೀಜಿ ಅವರ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.

ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದೇ ನಿಜವಾದ ಗಾಂಧಿ ತತ್ವ. ಗಾಂಧೀಜಿಯವರ ಜೀವನ ಚರಿತ್ರೆ ಆತ್ಮಕಥೆ ಬರೆದು ಪ್ರಕಟಗೊಂಡು ನೂರು ವರ್ಷ ತುಂಬಿದೆ. ಇದನ್ನು ಓದಿ ಲಕ್ಷಾಂತರ ಜನರು, ಯುವಜನರು, ಭಾರತೀಯರಿಗೆ ಸ್ಪೂರ್ತಿಯಾಗಿದೆ. ಪ್ರಪಂಚದಾದ್ಯಂತ ಜನರು ಗಾಂಧೀಜಿ ಅವರ ಆತ್ಮಕಥೆ ಓದಿ ಅದರಿಂದ ಪ್ರಭಾವಿತರಾಗಿದ್ದಾರೆ. ವಿದ್ಯಾರ್ಥಿಗಳೇ ನೀವು ಓದಬೇಕು ಎಂದು ಸಲಹೆ ನೀಡಿದರು.
ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಜೀವರಾಜ್ ಆಳ್ವ ಅವರು ಯುವಜನ ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ರಾಜ್ಯದಲ್ಲಿ ಕಲಾಮಂದಿರ ಹಾಗೂ ಆಟದ ಮೈದಾನಗಳನ್ನು ನಿರ್ಮಿಸುವ ಮೂಲಕ ಯುವಜನರಲ್ಲಿರುವ ಸೂಕ್ತ ಪ್ರತಿಭೆಗಳನ್ನು ವೇದಿಕೆ ಕೊಡುವ ಕೆಲಸ ಮಾಡಿದರು. ಯುವ ಚೇತನಗಳಿಗೆ ತರಬೇತಿ ನೀಡುವ ಕೆಲಸ ಮಾಡಿದರು ಎಂದು ತಿಳಿಸಿದರು.
ಮೊದಲು ಯುವಕ ಸಂಘಗಳು ಹಾಗೂ ಯುವತಿ ಮಂಡಳಿಗಳು ಭಾವೈಕ್ಯತೆ ಮೂಡಿಸುವ ಕೆಲಸ ಮಾಡುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಜಾತಿ ಹಾಗೂ ಅಭಿಮಾನಿಗಳ ಹೆಸರಿನಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಯುವಕ ಸಂಘಗಳು ಸ್ಥಾಪನೆಯಾಗಿ ಯುವಕರು ಪಲ್ಲಟಗೊಳ್ಳುವ ಸಂದರ್ಭದಲ್ಲಿ ಯುವ ಮನಸ್ಸು ಗಾಂಧಿ ವಿಚಾರವಾದವು ಅಗತ್ಯ ಮತ್ತು ಅನಿವಾರ್ಯತೆ ಇದ್ದು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿ ಕೆ.ಪಿ.ಮೃತ್ಯುಂಜಯ ಯಾಕಾಗಿ ಗಾಂಧಿ ವಿಷಯ ಕುರಿತು ಹಾಗೂ ಯುವಜನತೆ ಮತ್ತು ಗಾಂಧಿ ಕುರಿತು ಅಕ್ಕ ಮಹಾದೇವಿ ವಿವಿ ವಿಶೇಷ ಅಧಿಕಾರಿ ಡಾ.ವಿಷ್ಣು ಎಂ.ಶಿಂಧೆ ವಿಶೇಷ ಉಪನ್ಯಾಸ ನೀಡಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಸಾದ್ ಪಟ್ಟಣಗೆರೆ, ಕೃಷಿ ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಪಿ.ಪ್ರವೀಣ್, ಉಪನ್ಯಾಸಕಿ ಡಾ.ಸುಚೇತಾ, ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಪ್ರೊ.ಕೆ.ನಾಗಾನಂದ, ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಎನ್.ಪರಮೇಶ್, ಪರಿಸರ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಇತರರು ಭಾಗವಹಿಸಿದ್ದರು. ಇದೇ ವೇಳೆ ಕುಂಚದಲ್ಲಿ ಗಾಂಧೀಜಿ ಅವರ ಕುರಿತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಂಧೀಜಿ ಅವರನ್ನು ಕುರಿತು ಚಿತ್ರ ರಚಿಸಿದರು. ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಗಾಂಧಿ ನೆನಪಿನಲ್ಲಿ ಸಸ್ಯೋತ್ಸವ
ರಾಜ್ಯಮಟ್ಟದ ವಿಚಾರ ಮಂಥನ ಕಾರ್ಯಕ್ರಮದ ಅಂಗವಾಗಿ ಹಾಗೂ ಗಾಂಧಿ ನೆನಪಿನಲ್ಲಿ ನಗರದ ಗಜೇಂದ್ರ ಮೋಕ್ಷ ಕೊಳದ ಸಮೀಪ ಸಸ್ಯೋತ್ಸವ ಆಚರಣೆ ಮಾಡಲಾಯಿತು. ಕೊಳದ ಬದುವಿನಲ್ಲಿ 10ಕ್ಕೂ ಹೆಚ್ಚು ವಿವಿಧ ತಳಿಯ ಗಿಡ ನೆಟ್ಟು ನೀರೆರೆಯಲಾಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಸಾದ್ ಪಟ್ಟಣಗೆರೆ ಸಸ್ಯೋತ್ಸವಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net