ಮಂಡ್ಯ:ಗುಣಮಟ್ಟದ ಶಿಕ್ಷಣ, ಅತ್ಯುತ್ತಮ ಕ್ರೀಡಾ ಸೌಲಭ್ಯ ಸೇರಿದಂತೆ ಶೈಕ್ಷಣಿಕವಾಗಿ ಎಲ್ಲ ರೀತಿಯಲ್ಲಿಯೂ ಉನ್ನತ ಸ್ಥಾನದಲ್ಲಿರುವ ನಗರದ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿಗೆ ಮತ್ತೊಂದು ಗರಿ ಮುಡಿಗೇರಿದೆ. ಕ್ರೀಡಾ ಸಾಧನೆಗೆ ರಾಜ್ಯಮಟ್ಟದ ಮನ್ನಣೆ ಸಿಕ್ಕಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಬೆಳಗಾವಿ ವತಿಯಿಂದ 2023-24ನೇ ಸಾಲಿನ ಸಂಸ್ಥೆಗಳ ಕ್ರೀಡಾ ನಗದು ಪ್ರಶಸ್ತಿ ಪ್ರಕಟಿಸಲಾಗಿದೆ. ಅದರಂತೆ 461 ಅಂಕದೊಂದಿಗೆ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ರಾಜ್ಯಾದ್ಯಂತ ಇರುವ 200ಕ್ಕೂ ಅಧಿಕ ವಿ.ಟಿ.ಯು ಅಂಗಸಂಸ್ಥೆಯ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಮೊದಲ ಐದರೊಳಗೆ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಈ ಸಾಧನೆಗಾಗಿ ಕಾಲೇಜಿಗೆ 1 ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಲಭಿಸಿದ್ದು, ಜೂ.19ರಂದು ಬೆಳಗಾವಿಯ ವಿ.ಟಿ.ಯು ನಲ್ಲಿ ನಡೆದ ಅಚೀವರ್ಸ್ ಡೇ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಈ ಪ್ರಶಸ್ತಿಗೆ ಆಯ್ಕೆ ಮಾಡಲು ಕೆಲ ಮಾನದಂಡ ಇರುತ್ತದೆ. ಕ್ರೀಡಾ ಚಟುವಟಿಕೆಯ ಆಯೋಜನೆ, ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸುವುದರ ಜತೆಗೆ ಬಹುಮಾನ ಪಡೆದಿರುವ ಅಂಶ ಪರಿಗಣಿಸಲಾಗುತ್ತದೆ. ಅದರಂತೆ ಕ್ರೀಡಾಕೂಟಗಳ ಆಯೋಜನೆ ಜತೆಗೆ ಕಾಲೇಜಿನಿಂದ ಹಲವು ಕ್ರೀಡೆಗಳಿಗೆ ವಿದ್ಯಾರ್ಥಿಗಳು ಭಾಗವಹಿಸುವುದರೊಂದಿಗೆ ಪ್ರಶಸ್ತಿ ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ರಾಜ್ಯದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಅಗ್ರ ಐದರೊಳಗೆ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ. ಕ್ರೀಡಾಪಟುಗಳ ನಿರಂತರ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಶೈಕ್ಷಣಿಕ ಸಾಧನೆಯ ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಶ್ರೇಷ್ಠತೆಯನ್ನು ಸಾಧಿಸುವ ನಮ್ಮ ಬದ್ಧತೆಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ. ಈ ಸಾಧನೆಗೆ ಕಾರಣರಾದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಲ್.ಮುರಳೀಕೃಷ್ಣ, ಉಪ ಪ್ರಾಂಶುಪಾಲ ಡಾ.ಎಸ್.ವಿನಯ್, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಅನಂತಪದ್ಮನಾಭ ಪ್ರಭು, ಆರ್.ವಿ.ವಿದ್ಯಾ ಇದ್ದರು.