ನವೆಂಬರ್‌ನಲ್ಲಿ ರಾಜ್ಯಮಟ್ಟದ ಕೃಷಿಮೇಳ: ವಿ.ಸಿ ಫಾರಂನಲ್ಲಿ ನಡೆಯುತ್ತಿರುವ ಅಗತ್ಯ ಸಿದ್ಧತೆ

ಮಂಡ್ಯ ತಾಲೂಕು ವಿ.ಸಿ ಫಾರಂನ ಹೊರನೋಟ.
ಮಂಡ್ಯ ತಾಲೂಕು ವಿ.ಸಿ ಫಾರಂನ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಹಲವು ಆಕರ್ಷಣೆಯ ಚಟುವಟಿಕೆಗಳು
  • ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶ

ಮಂಡ್ಯ:

ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನವೆಂಬರ್ ಕೊನೇ ವಾರದಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಕೃಷಿ ಮೇಳವನ್ನು ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ವಿ.ಸಿ ಫಾರಂನಲ್ಲಿ ಅಗತ್ಯ ಸಿದ್ಧತೆ ನಡೆಯುತ್ತಿದೆ.

ಪ್ರಕೃತಿಯೊಂದಿಗೆ ಸಮೃದ್ಧ ಕೃಷಿ ಎಂಬ ಘೋಷವಾಕ್ಯದಡಿ ಕೃಷಿಮೇಳ ನಡೆಯಲಿದೆ. ರೈತರು, ಕೃಷಿ ವಿದ್ಯಾರ್ಥಿಗಳು, ಕೃಷಿ ಉದ್ಯಮಿಗಳು ಹಾಗೂ ಸಾರ್ವಜನಿಕರನ್ನು ಒಳಗೊಂಡ ಕೃಷಿಮೇಳವು ವಿಶ್ವವಿದ್ಯಾಲಯದ ಸಂಶೋಧನೆ, ಶಿಕ್ಷಣ ಹಾಗೂ ವಿಸ್ತರಣಾ ಚಟುವಟಿಕೆಗಳ ಮೂಲಕ ಅಭಿವೃದ್ಧಿಪಡಿಸಿರುವ ನವೀನ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಕೃಷಿ ತಂತ್ರಜ್ಞಾನಗಳನ್ನು ಪ್ರದರ್ಶಿಸಿ, ಅವುಗಳನ್ನು ರೈತ ಸಮುದಾಯಕ್ಕೆ ತಲುಪಿಸುವ ಪ್ರಮುಖ ವೇದಿಕೆಯಾಗಲಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಕ್ಷೀಣತೆ, ಕಡಿಮೆಯಾಗುತ್ತಿರುವ ಮಣ್ಣಿನ ಫಲವತ್ತತೆ, ಕೃಷಿ ವೆಚ್ಚದ ಹೆಚ್ಚಳ ಹಾಗೂ ಸುರಕ್ಷಿತ ಮತ್ತು ಪೌಷ್ಟಿಕ ಆಹಾರದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಕೃತಿಯೊಂದಿಗೆ ಹೊಂದಾಣಿಕೆಯಾಗುವ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಪ್ರಮುಖ ಉದ್ದೇಶವಾಗಿದೆ.
ಈ ವರ್ಷದ ಕೃಷಿಮೇಳದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಹವಾಮಾನ-ಸಹಿಷ್ಣು ಹಾಗೂ ಸುಸ್ಥಿರ ಕೃಷಿ ಪದ್ಧತಿ, ಸಮಗ್ರ ಕೃಷಿ ಪದ್ಧತಿ ಮತ್ತು ಬೆಳೆ ವೈವಿಧ್ಯೀಕರಣ, ಕೃಷಿ ಯಾಂತ್ರೀಕರಣ, ಡ್ರೋಣ್, ರೋಬೋಟಿಕ್ಸ್ ಮತ್ತು ಡಿಜಿಟಲ್ ಕೃಷಿ, ನೈಸರ್ಗಿಕ ಹಾಗೂ ಸಾವಯವ ಕೃಷಿ, ನಿಖರ ಕೃಷಿ ಮತ್ತು ಸ್ಮಾರ್ಟ್ ಕೃಷಿ, ಮೌಲ್ಯವರ್ಧನೆ ಹಾಗೂ ಆಹಾರ ಸಂಸ್ಕರಣೆ, ಕೃಷಿ ಉದ್ಯಮಶೀಲತೆ, ಕೃಷಿ ಮತ್ತು ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಕೃಷಿ-ಪರ್ಯಟನ ಪ್ರಚಾರ, ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ, ಆಕರ್ಷಕ ಕೀಟ ಪ್ರಪಂಚ ಪ್ರದರ್ಶನ, ಸ್ಥಳೀಯ ಹಾಗೂ ದೇಸಿ ಜಾನುವಾರು ತಳಿಗಳ ಪ್ರದರ್ಶನ, ಸಂವೇದಕ ಆಧಾರಿತ ಸ್ಮಾರ್ಟ್ ನೀರಾವರಿ ವ್ಯವಸ್ಥೆಗಳು, ಸಾಧಕ ಕೃಷಿಕರಿಗೆ ಸನ್ಮಾನ ಹಾಗೂ ವಿಜ್ಞಾನಿ-ರೈತ ಸಂವಾದ ಕಾರ್ಯಕ್ರಮವಿರಲಿದೆ.

ಸುಸ್ಥಿರ ಕೃಷಿ ಅಭಿವೃದ್ಧಿಗೆ ಉತ್ತೇಜನ
ಪ್ರಕೃತಿಯೊಂದಿಗೆ ಸಮೃದ್ಧ ಕೃಷಿ ಎಂಬ ಘೋಷವಾಕ್ಯ ಭಾರತೀಯ ಕೃಷಿಯ ಭವಿಷ್ಯದ ದಿಕ್ಕನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಪ್ರಕೃತಿಯೊಂದಿಗೆ ಸಾಮರಸ್ಯ ಹೊಂದಿರುವ ಕೃಷಿ ಪದ್ಧತಿಗಳು ರೈತರ ಆದಾಯವನ್ನು ಹೆಚ್ಚಿಸಲು, ಮಣ್ಣಿನ ಆರೋಗ್ಯವನ್ನು ವೃದ್ಧಿಸಲು, ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಹಾಗೂ ದೀರ್ಘಕಾಲೀನ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿವೆ ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net