ಶ್ರೀಆದಿರಂಗನಿಗೆ ಸಹಸ್ರ ಕಳಸಾಭಿಷೇಕ

ಪಟ್ಟಣದ ಶ್ರೀಆದಿರಂಗನಾಥಸ್ವಾಮಿ ಗುರುವಾರ ಲೋಕಕಲ್ಯಾಣರ್ಥ ನಡೆಯುವ ಮಹಾಅಭಿಷೇಕಕ್ಕೆ 1008 ಸಹಸ್ರ ಕಳಸಗಳಲ್ಲಿ ದ್ರವ್ಯ ಸಂಗ್ರಹಿಸಲು ವೈದಿಕರು ಜೀವನದಿ ಕಾವೇರಿಯಿಂದ ಕುಂಭಗಳಲ್ಲಿ ತೀರ್ಥ ಹೊತ್ತು ಉತ್ಸವದ ಮೂಲಕ ದೇವಾಲಯಕ್ಕೆ ಆಗಮಿಸಿದರು.
ಪಟ್ಟಣದ ಶ್ರೀಆದಿರಂಗನಾಥಸ್ವಾಮಿ ಗುರುವಾರ ಲೋಕಕಲ್ಯಾಣರ್ಥ ನಡೆಯುವ ಮಹಾಅಭಿಷೇಕಕ್ಕೆ 1008 ಸಹಸ್ರ ಕಳಸಗಳಲ್ಲಿ ದ್ರವ್ಯ ಸಂಗ್ರಹಿಸಲು ವೈದಿಕರು ಜೀವನದಿ ಕಾವೇರಿಯಿಂದ ಕುಂಭಗಳಲ್ಲಿ ತೀರ್ಥ ಹೊತ್ತು ಉತ್ಸವದ ಮೂಲಕ ದೇವಾಲಯಕ್ಕೆ ಆಗಮಿಸಿದರು.
Published on
ಶ್ರೀರಂಗಪಟ್ಟಣ: ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನೂರಾರು ವರ್ಷಗಳ ಬಳಿಕ ಲೋಕ ಕಲ್ಯಾಣಾರ್ಥ ಶ್ರೀಆದಿರಂಗನಿಗೆ ಸಹಸ್ರ ಕಳಸಾಭಿಷೇಕ ನೆರವೇರಿಸಲಾಗುತ್ತಿದೆ.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ 3 ದಿನಗಳ ಅಪರೂಪದ ಆಚರಣೆಗೆ ದೇವಾಲಯ ತಳಿರು ತೋರಣಗಳಿಂದ, ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ಪೂಜಾ ಕೈಂಕರ್ಯ ಆರಂಭಿಸಲಾಗಿದ್ದು, ಪ್ರಥಮ ಹಂತವಾಗಿ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ 80ಕ್ಕೂ ಹೆಚ್ಚು ವೈದಿಕರು ಅಂಕುರಾರ್ಪಣೆ ಕಾರ್ಯ ಪ್ರಾರಂಭಿಸಿ ಮೃತ್ತಿಕ(ಹುತ್ತದ ಮಣ್ಣು)ಸಂಗ್ರಹಣೆ, ತುಳಸಿ ಪೂಜೆಯೊಂದಿಗೆ ತುಳಸಿದಳದ ಮಣ್ಣನ್ನು ಪಡೆದು ಅಂಕುರಾರ್ಪಣ ಪ್ರೋಕ್ಷಣೆಗಾಗಿ ಯಾಗಶಾಲೆಯಲ್ಲಿ ನವಧಾನ್ಯಗಳನ್ನು ಗಂಗೆಯಲ್ಲಿ ನೆನೆಸಿಟ್ಟು ಬೀಜವಾಪನ ಪ್ರಕ್ರಿಯೆಯೊಂದಿಗೆ ಯಾಗಶಾಲೆಯಲ್ಲಿ ಅಂಕುರಾರ್ಪಣಾ ಹೋಮ ನಡೆಸಿದ್ದರು.
ಬಳಿಕ ಸಹಸ್ರ ಕಳಸಗಳಲ್ಲಿಟ್ಟು ದ್ರವ್ಯತೀರ್ಥ ತುಂಬಿಸುವ ಮುಂಚಿತವಾಗಿ ಕುಂಭಗಳಲ್ಲಿ ಹಾಕಲು ಭಾರತದ ವಿವಿಧ ರಾಜ್ಯಗಳ ಮೂಲೆ ಮೂಲೆಗಳಿಂದ ವಿಶೇಷ ಗಿಡಮೂಲಿಕೆಗಳು ಹಾಗೂ ಬಲು ಅಪರೂಪದ ಸಸಿಗಳ ಬೇರುಗಳನ್ನು ಹುಡುಕಿಸಿ ತರಿಸಿಕೊಳ್ಳಲಾಗಿದೆ. 
ಜೀವನದಿ ಕಾವೇರಿಯಲ್ಲಿ ಬುಧವಾರ ಮುಂಜಾನೆ ಪೂಜೆಗಳ ಹಾದಿಯಾಗಿ ನೂರಾರು ಕುಂಭಗಳಲ್ಲಿ ತೀರ್ಥ ಸಂಗ್ರಹಿಸಿ ತಲೆಯ ಮೇಲೆ ಹೊತ್ತು ಆಗಮಿಸಿದ ವೈದಿಕರು 1008 ಕಳಸಗಳಿಗೆ ತೀರ್ಥ ತುಂಬಿಸಿದ್ದು, ಸಂಜೆ 1008 ಕಳಸಗಳಲ್ಲಿ ತಲಾ ಒಂದೊಂದು ಕಳಸಗಳಿಗೂ ಬೇರೆ ಬೇರೆ ಗಿಡಮೂಲಿಕೆ ಮತ್ತು ಬೇರುಗಳನ್ನು ಹಾಕಿ ಅಂಕುರಾರ್ಪಣ ಹೋಮಕ್ಕೆ ಸಿದ್ಧತೆ ಕೈಗೊಳ್ಳಲಾಯಿತು. ಈ ವೇಳೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಭಾರತದಿಂದ ಆಗಮಿಸಿದ್ದ ವೈದಿಕರು ಋಗ್ವೇದ, ಯರ್ಜುವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣದೊಂದಿಗೆ ವಿಷ್ಣುಸಹಸ್ರನಾಮಗಳ ಪಠಣ ನಡೆಸಿದ್ದು, ಈ ವೇಳೆ ಮಂಗಳವಾದ್ಯಗಳಿಂದ ನಾದಸ್ವರಗಳು ಹೊಮ್ಮುವ ಜತೆಗೆ ವಿವಿಧ ಕಲಾವಿದರುಗಳಿಂದ ಭಕ್ತಿಗೀತೆಗಳ ಸಂಗೀತ ಸೇವೆಗಳು ಜರುಗಿದವು.  
ಶ್ರೀರಂಗನಾಥಸ್ವಾಮಿ ವಿಶೇಷ ಪೂಜಾ ಕೈಂಕರ್ಯಗಳ ಆಚರಣೆಗೆ ಹೊಣೆ ಹೊತ್ತ ಕ್ಷೇತ್ರದ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮತ್ತು ಸುಮತಿ ದಂಪತಿ ದೇವಾಲಯದ ಪ್ರಾಂಗಣದಲ್ಲಿ ಕುಳಿತು ರಕ್ಷಾ ಬಂಧನದೊಂದಿಗೆ ಸಂಕಲ್ಪ ಕೈಗೊಳ್ಳುವ ಮೂಲಕ ಸಹಸ್ರ ಕಳಸಾಭಿಷೇಕಗಳ ದ್ರವ್ಯ ಸಮರ್ಪಣಾ ಕಾರ್ಯಕ್ಕೆ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜ್ಯ, ಹೊರರಾಜ್ಯಗಳ ಭಕ್ತರು ಮತ್ತು ಪುರಜನರು ಪೂಜಾ ಕಾರ್ಯದಲ್ಲಿ ಭಾಗಿಯಾದರು. ಭಕ್ತರಿಗಾಗಿ ವಿಶೇಷ ಪ್ರಸಾದ ಸಂರ್ತಪಣೆಯ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.
ನ.27ರ ಗುರುವಾರದಂದು ಮುಂಜಾನೆ ಪೂರ್ಣಾಹುತಿ ಬಳಿಕ ಬ್ರಾಹ್ಮಿ ಮುಹೂರ್ತ 6ರ ವೇಳೆಯಿಂದ ಆದಿಶೇಷ ಸ್ವರೂಪಿ ಶ್ರೀರಂಗನಾಥಸ್ವಾಮಿಯ ಮೂಲಮೂರ್ತಿ ಸೇರಿದಂತೆ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರು ಹಾಗೂ ಪಂಚಲೋಹದ ಉತ್ಸವಮೂರ್ತಿಗಳಿಗೆ ಸಹಸ್ರ ದೈವಗಳ ಅಹ್ವಾವನೆಗೊಂಡ ಸಹಸ್ರ ಕಳಸಗಳಿಂದ ಅಭಿಷೇಕ ನೆರವೇರಿಸಲಾಗುತ್ತಿದೆ. ಸ್ವಾಮಿಗೆ ಸಂಜೆಯ ಬಳಿಕ ಅಭೂತಪೂರ್ವ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸುವ ಜತೆಗೆ ಸಂಜೆ ವಿಶೇಷ ಪಲ್ಲಕ್ಕಿ ಉತ್ಸವ ನೆರವೇರಿಸಲಾಗುತ್ತಿದೆ.   
ಅದ್ವೈತ ವಾಚಸ್ಪತಿ ಡಾ.ವಿ.ಭಾನುಪ್ರಕಾಶ್ ಶರ್ಮ, ಪುರಸಭಾ ಅಧ್ಯಕ್ಷ ಎಂ.ಎಲ್.ದಿನೇಶ್, ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸೋಮಶೇಖರ್, ಕಾರ್ಯನಿರ್ವಾಹಕ ಅಧಿಕಾರಿ ಉಮಾ, ಮುಜರಾಯಿ ತಹಸೀಲ್ದಾರ್ ತಮ್ಮೇಗೌಡ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net